ಡೆಹ್ರಾಡೂನ್: ಕುಟುಂಬಸ್ಥರಿಂದ ದೂರವಾಗಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮೃತನಾಗಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡುವ ವೇಳೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಆತ ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ್ ಜಿಲ್ಲೆಯಲ್ಲಿ ನಡೆದಿದೆ.
ಮೂಲತಃ ಉಧಮ್ ಸಿಂಗ್ ನಗರ ಜಿಲ್ಲೆಯ ಧಾಪ್ಲಾ ನಿವಾಸಿ ನವೀನ್ ಚಂದ್ರ ಭಟ್(42) ಮದ್ಯದ ಚಟದಿಂದ ಮನೆಯಿಂದ ನಾಪತ್ತೆಯಾಗಿದ್ದರು. ನವೀನ್ ತಂದೆ ಧರ್ಮಾನಂದ ಭಟ್ ಅವರಿಗೆ ನ.25ರಂದು ಪೊಲೀಸರು ಕರೆ ಮಾಡಿ, ಹಲ್ದಾವನಿಯಲ್ಲಿ ವಾರಸುದಾರರಿಲ್ಲದ ಶವ ಪತ್ತೆಯಾಗಿದ್ದು, ಅವರ ಜೇಬಿನಿಂದ ನವೀನ್ ಭಟ್ ಎಂದು ಬರೆದ ಚೀಟಿ ವಶಪಡಿಸಿಕೊಳ್ಳಲಾಗಿದೆ ಎಂದಿದ್ದರು. ನಂತರ ಕುಟುಂಬಸ್ಥರು ಹೋಗಿ ಅದು ನವೀನ್ ಶವ ಎಂದು ಗುರುತಿಸಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಿಸಲು ಸಜ್ಜಾಗಿದ್ದರು.
ಈ ಮಧ್ಯೆ ಒಂದು ದಿನದ ಹಿಂದೆ ರುದ್ರಪುರದಲ್ಲಿ ನವೀನ್ನನ್ನು ನೋಡಿದ್ದಾಗಿ ಕುಟುಂಬದ ಪರಿಚಯಸ್ಥರೊಬ್ಬರು ತಿಳಿಸಿದ್ದಾರೆ. ಕುಟುಂಬದ ಸಂದೇಹ ಹೋಗಲಾಡಿಸಲು ಆ ವ್ಯಕ್ತಿ ನವೀನ್ ಮತ್ತು ಆತನ ಸಂಬಂಧಿಕರ ನಡುವೆ ವೀಡಿಯೋ ಕರೆ ಮಾಡಿ, ಆತ ಎಲ್ಲಿದ್ದಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾನೆ.
ಬದುಕಿರುವಾಗಲೇ ಅಂತ್ಯಕ್ರಿಯೆಗೆ ಸಜ್ಜಾದ್ದರಿಂದ ನವೀನ್ಗೆ ನಾರಾಯಣ ಭಟ್ ಎಂದು ಮರುನಾಮಕರಣ ಮಾಡಿ, ಅವರ ಹೆಂಡತಿ ಜತೆ ಮರುಮದುವೆ ಮಾಡಿದ್ದಾರೆ.