ರಾಮನಗರ: ಕಾರಿನಲ್ಲಿ ಶವ ಪತ್ತೆ ಆಗುತ್ತಿರುವ ಪ್ರಕರಣಗಳ ಪಟ್ಟಿಗೆ ಇನ್ನೊಂದು ಪ್ರಕರಣ ಸೇರ್ಪಡೆ ಆಗಿದೆ. ರಾಮನಗರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಬೆಂಗಳೂರು ಮೂಲದ ವ್ಯಕ್ತಿ ನಿಗೂಢವಾಗಿ ಸಾವಿಗೀಡಾಗಿರುವುದು ಕಂಡುಬಂದಿದೆ.
ಎಸ್. ರಾಕೇಶ್ ಶರ್ಮಾ (35) ಸಾವಿಗೀಡಾದ ವ್ಯಕ್ತಿ. ಮಾಗಡಿ ತಾಲೂಕು ಸೋಲೂರು ಹೋಬಳಿಯ ಬಾನವಾಡಿ ಗ್ರಾಮದ ಕೆರೆ ಬಳಿ ನಿಂತಿದ್ದ ಕಾರಿನಲ್ಲಿ ಈತನ ಶವ ಪತ್ತೆಯಾಗಿದೆ. ಬೆಂಗಳೂರು ಮೂಲದ ಈತ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ವ್ಯವಸ್ಥಾಪಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ.
ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈತ ಕೆಲಸ ಮಾಡುತ್ತಿದ್ದ ಕಂಪನಿಯ ಗುರುತಿನ ಚೀಟಿ ಶವದ ಬಳಿ ಪತ್ತೆಯಾಗಿದೆ. ಅದರಲ್ಲಿನ ಮಾಹಿತಿ ಮೇರೆಗೆ ಪೊಲೀಸರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.