ನ್ಯೂಸ್

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಕಾಂಗ್ರೆಸ್ ಜನಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್​ ಗ್ಯಾರಂಟಿ ಯೋಜನೆಗಳೆ ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ಅವರು ವೃದ್ಧಾಪ್ಯ, ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರ ಪಂಪ್​​ಸೆಟ್​​ಗೆ 10 ಹೆಚ್​ಪಿ ಉಚಿತ ವಿದ್ಯುತ್, ಕೃಷ್ಣ ಅವರ ಕಾಲದಲ್ಲಿ ಸ್ತ್ರೀಶಕ್ತಿ ಸಂಘ ಯೋಜನೆ ಜಾರಿಗೆ ಬಂದಿತು. ಇದರಲ್ಲಿ ಯಾವುದಾದರೂ ಒಂದು ಯೋಜನೆಯನ್ನು ನಿಲ್ಲಿಸಲಾಗಿದೆಯೇ. ಬಡವರಿಗೆ ನಿವೇಶನ, ಮನೆ ನೀಡುವ ಯೋಜನೆ ನಿಂತಿದೆಯೇ. ಅದೇ ರೀತಿ ಬಿಜೆಪಿಯವರು ನೂರು ಜನ್ಮ ತಳೆದರೂ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಬಣ್ಣಿಸಿದ್ದಾರೆ.

ಪದ್ಮನಾಭನಗರದಲ್ಲಿ ನಮ್ಮ ಕಾರ್ಯಕರ್ತರ ಹುಮ್ಮಸ್ಸು, ಶಕ್ತಿ ಸ್ಫೂರ್ತಿ ನೋಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನಮ್ಮ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನಮ್ಮ ಈ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಂದಿದ್ದು ಯಾಕೆ. ಇವುಗಳ ಅವಶ್ಯಕತೆ ಏನು ಎಂಬುದು ಪ್ರಮುಖವಾದ ವಿಚಾರವಾಗಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ರಾಜಕಾರಣ ಎಂದ ಮೇಲೆ ಗೆಲುವು, ಸೋಲು ಇರುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಜನರ ಬದುಕಿನ ಬಗ್ಗೆ ಆಲೋಚಿಸುತ್ತದೆ. ಜನರ ಬದುಕು ಕಟ್ಟುವ ಕೆಲಸ ಮಾಡುತ್ತದೆ. ಬಿಜೆಪಿಯವರು ದೇವರು, ಧರ್ಮ, ಜಾತಿ ಆಧಾರವಾಗಿ, ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಬಿಜೆಪಿಯವರೂ ಈ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಿದ್ದರೆ ಅಶೋಕ್ ಅವರು ತಮ್ಮ ಕಾರ್ಯಕರ್ತರಿಗೆ ಹೇಳಿ ಈ ಗ್ಯಾರಂಟಿ ಯೋಜನೆ ಪ್ರಯೋಜನ ಪಡೆಯದಂತೆ ಸಲಹೆ ನೀಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಸಂವಿಧಾನವೇ ನೀಡಿದೆ. ವಿರೋಧ ಪಕ್ಷದ ನಾಯಕರ ಕ್ಷೇತ್ರದಿಂದಲೇ ಈ ಗ್ಯಾರಂಟಿ ಯೋಜನೆಗಳ ಸಮಿತಿಯನ್ನು ಕಚೇರಿ ಉದ್ಘಾಟನೆ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಹೀಗಾಗಿ ಪ್ರಮೋದ್ ಹಾಗೂ ಅವರ ತಂಡದವರಿಗೆ ಒಂದು ಮಾತು ಹೇಳುತ್ತಿದ್ದೇನೆ. ನೀವು ಕ್ಷೇತ್ರದಲ್ಲಿ ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ, ಇಲ್ಲವೇ? ಎಂದು ಪರಿಶೀಲನೆ ಮಾಡಬೇಕು. ಜನರ ವಿಶ್ವಾಸಗಳಿಸಬೇಕು. ಮನುಷ್ಯನಿಗೆ ನಂಬಿಕೆ ಮುಖ್ಯ. ನಮ್ಮ ಕೆಲಸ ಬಡವರಿಗೆ ಅನುಕೂಲವಾಗುತ್ತದೆ ಎಂದು ನಾವು ನಂಬಿದ್ದೇವೆ. ಲೋಕಸಭೆ ಚುನಾವಣೆಯೇ ಬೇರೆ, ವಿಧಾನಸಭಾ ಕ್ಷೇತ್ರ ಚುನಾವಣೆಯೇ ಬೇರೆ. ಪಾಲಿಕೆ ಚುನಾವಣೆಯೂ ಮುಂದಿನ ದಿನಗಳಲ್ಲಿ ನಡೆಯಲಿದೆ. ಮುಂದೆ ನಿಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಇರಲಿ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನೀವು ದಿನ ಬೆಳಗಾದರೆ ಕೈನಲ್ಲಿ ದೇವರನ್ನು ಕಾಣುತ್ತಾ ಪ್ರಾರ್ಥನೆ ಮಾಡುತ್ತೀರಿ. ದುಡಿಮೆಯ ಶಕ್ತಿ ಈ ಕೈ. ಇಂದಿರಾ ಗಾಂಧಿ ಅವರು ಕೊಟ್ಟ ಈ ಕೈಯನ್ನು ಸುಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.