ಬೆಂಗಳೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದು, ನಮ್ಮ ಸರ್ಕಾರ ಸುಭದ್ರವಾಗಿದೆ. ಸ್ವಾಮೀಜಿಗಳು, ಗುರೂಜಿಗಳು ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ (DK Shivakumar) ಸಿಎಂ ಆಗ್ತಾರೆ ಎಂಬ ವಿನಯ್ ಗುರೂಜಿ ಹೇಳಿಕೆಗೆ ಪ್ರತಿಕಿಯಿಸಿ, ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ. ನಮ್ಮ ಸರ್ಕಾರದ ವಿಚಾರದಲ್ಲಿ ತಮ್ಮ ಯಾವ ಹೇಳಿಕೆ ಬೇಡ. ನಮ್ಮ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಕೆಲಸ ಮಾಡ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡ್ತಿದ್ದೇವೆ. ಯಾರೂ ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಹೇಳಿದ್ದಾರೆ.
ಪವರ್ ಶೇರಿಂಗ್ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಪವರ್ ಇಲ್ಲ, ಯಾವ ಶೇರಿಂಗೂ ಇಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ. ಅಲ್ಲದೇ, ನಾನು, ಸಿಎಂ ಸಭೆ ಕರೆದಿದ್ದೇವೆ. ಎಲ್ಲಾ ಸಭೆ ರದ್ದು ಮಾಡಿ ಸಂಜೆ ಪದಾಧಿಕಾರಿಗಳ ಇತರೆ ಸಭೆ ಇದೆ. ಸುರ್ಜೇವಾಲ ಬರ್ತಾರೆ, ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ. ಎಂಎಲ್‌ಎ, ಮಂತ್ರಿಗಳಿಗೆ ಜವಾಬ್ದಾರಿ ಕೊಡಬೇಕಿದೆ. ನಾಳೆ ಸಿಎಂ, ನಾನು ದೆಹಲಿಗೆ ಹೋಗ್ತಿದ್ದೇವೆ. ದೆಹಲಿಯಲ್ಲಿ ಹೊಸ ಕಟ್ಟಡ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವ ಎಚ್ಡಿಕೆ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿ, ಹೌದಾ.? ಅವರ ರೇಟ್ ಕಾರ್ಡಾ? ಅವರ ಕಾರ್ಡ್ ಫಿಕ್ಸ್ ಇರಬೇಕು. ಅವರ ಅನುಭವ ಮಾತಾಡ್ತಿದ್ದಾರೆ, ನನಗೆ ಗೊತ್ತಿಲ್ಲ. ಅದ್ಯಾವ್ದೋ ಪೂಜೆದೆಲ್ಲಾ ಹೇಳಿದ್ದಾರೆ ಅಲ್ವಾ.? ಅದು ಅವರ ಅನುಭವ. ಅವರು ಕದ್ದು ಮಾಡ್ತಾರೆ, ನಾನು ಓಪನ್ ಆಗಿ ಮಾಡ್ತೀನಿ, ದಿನಾ ಬೆಳಗ್ಗೆ ಪೂಜೆ ಮಾಡ್ತೀನಿ. ನಿಮ್ಮಂತವರು ತೊಂದರೆ ಕೊಡ್ತಾರೆ, ರಕ್ಷಣೆ ಕೊಡಪ್ಪಾ ಅಂತ ಮನವಿ ಮಾಡ್ತೀನಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಟಾಂಗ್ ಕೊಟ್ಟಿದ್ದಾರೆ.