ನ್ಯೂಸ್

SSLC ಪರೀಕ್ಷೆ ಟಾಪರ್​ಗಳನ್ನು ಸನ್ಮಾನಿಸಿದ ಡಿ.ಕೆ. ಶಿವಕುಮಾರ್-ಎಚ್​.ಸಿ. ಮಹದೇವಪ್ಪ

ಬೆಂಗಳೂರು: ಕೆಲ ದಿನಗಳ ಹಿಂದೆ ಪ್ರಕಟಗೊಂಡ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ನಿವಾಸಿ ಅಂಕಿತಾ ಚನ್ನಬಸಪ್ಪ ಹಾಗೂ ತೃತೀಯ ಸ್ಥಾನ ಪಡೆದ ಮಂಡ್ಯದ ತುಂಬಕೆರೆ ವಿದ್ಯಾರ್ಥಿ ನವನೀತ್​ರನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್​.ಸಿ. ಮಹದೇವಪ್ಪ ಸನ್ಮಾನಿಸಿದ್ದಾರೆ.

ಈ ಇಬ್ಬರು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಪ್ರಥಮ ಹಾಗೂ ತೃತೀಯ ರ್‍ಯಾಂಕ್​ ಬಂದ ಕಾರಣ ಅವರನ್ನು ಸನ್ಮಾನಿಸಿ ಉನ್ನತ ವ್ಯಾಸಂಗಕ್ಕಾಗಿ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ನೆರವನ್ನೂ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಕೂಡ ವಿದ್ಯಾರ್ಥಿಗಳಾದ ಅಂಕಿತಾ ಹಾಗೂ ನವನೀತ್​ರನ್ನು ಭೇಟಿ ಮಾಡಿ ಸನ್ಮಾನಿಸಿ ಸರ್ಕಾರದ ವತಿಯಿಂದ ಪ್ರಶಂಸನಾ ಪತ್ರ ನೀಡಿದರು. ಇದಲ್ಲದೆ ವಿದ್ಯಾರ್ಥಿಗಳಾದ ಅಂಕಿತಾಗೆ 5 ಲಕ್ಷ ರೂ., ನವನೀತ್​ಗೆ 2 ಲಕ್ಷ ರೂಪಾಯಿಗಳ ಚೆಕ್​ ವಿತರಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಮೂಲದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಹಾಗೂ ಮೂರನೇ ಸ್ಥಾನ ಪಡೆದ ಮಂಡ್ಯದ ಕನ್ನಲಿ ಗ್ರಾಮದ ನವನೀತ್‌ ಅವರನ್ನು ಇಂದು ಭೇಟಿಯಾಗಿ ಸನ್ಮಾನಿಸಿ ಗೌರವಿಸಿದೆ. ಹಾಗೆಯೇ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್‌ಗೆ 2 ಲಕ್ಷ ರೂ. ಚೆಕ್‌ ವಿತರಿಸಿದೆ. ಸರ್ಕಾರಿ ಶಾಲೆಯ ಮಕ್ಕಳು ಯಾರಿಗೇನೂ ಕಡಿಮೆಯಿಲ್ಲ ಎಂಬುದನ್ನು ಈ ಇಬ್ಬರೂ ಮಕ್ಕಳು ನಿರೂಪಿಸಿದ್ದಾರೆ. ಮುಂದೆ ಕೂಡ ಇದೇ ರೀತಿ ಓದಿ ನಿಮ್ಮ ಶಾಲೆ, ಶಿಕ್ಷಕರು, ಪೋಷಕರಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದ್ದಾಗಿ ಬರೆದುಕೊಂಡಿದ್ದಾರೆ.