ನ್ಯೂಸ್

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪೂರ್ವಜರ ಆಸ್ತಿ ನವೆಂಬರ್ 10ಕ್ಕೆ ಹರಾಜು

ಮುಂಬೈ: ಪಾಕಿಸ್ತಾನದ ಆಶ್ರಯದಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪೂರ್ವಜರ ಆಸ್ತಿಯನ್ನು ಹರಾಜು ಹಾಕಲು ಸ್ಮಗ್ಲಿಂಗ್ ಆಂಡ್ ಫಾರಿನ್ ಎಕ್ಸ್​ಚೆಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು ಕಾಯ್ದೆ) (ಎಸ್​ಎಎಫ್​ಇಎಂಎ) ಅಧಿಕಾರಿಗಳು ನಿರ್ಧರಿಸಿದ್ದಾರೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್ ತಾಲೂಕಿನಲ್ಲಿ ಈ ಆಸ್ತಿಗಳಿದ್ದು, ನವೆಂಬರ್ 10ರಂದು ಹರಾಜು ನಡೆಯಲಿದೆ. ಕೊಂಕಣದ ಗ್ರಾಮದಲ್ಲಿರುವ ದಾವೂದ್ ಪೂರ್ವಜರ ಮನೆ, ಜಮೀನು ಸೇರಿ ಒಟ್ಟು 7 ಆಸ್ತಿಗಳನ್ನು ಹರಾಜು ಹಾಕಲಾಗುತ್ತದೆ. ಇದರ ಜತೆಗೆ ದಾವೂದ್​ನ ಆಪ್ತನಾಗಿದ್ದ ಇಕ್ಬಾಲ್ ಮಿರ್ಚಿಗೆ ಸೇರಿದ ಎರಡು ಫ್ಲ್ಯಾಟ್​ಗಳನ್ನು ಸಹ ಅದೇ ದಿನ ಹರಾಜು ಮಾಡಲಾಗುತ್ತದೆ.

ಆಸಕ್ತರು ಎಸ್​ಎಎಫ್​ಇಎಂಎ ಕಚೇರಿಯಲ್ಲಿ ನವೆಂಬರ್ 6ರ ಸಂಜೆ 4 ಗಂಟೆಯೊಳಗೆ ಪ್ರತಿಯೊಂದು ಆಸ್ತಿಗೂ ಪ್ರತ್ಯೇಕ ಇಎಂಡಿ ಠೇವಣಿಯನ್ನು ಇರಿಸಬೇಕು. ಹರಾಜು ಪ್ರಕ್ರಿಯೆ ಇ-ಹರಾಜು, ಸಾರ್ವಜನಿಕ ಹರಾಜು ಮತ್ತು ಮುಚ್ಚಿದ ಲಕೋಟೆಯ ಟೆಂಡರ್​ಗಳ ಮೂಲಕ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)