ನ್ಯೂಸ್

ಪುಷ್ಪರಾಜ್ ಎನ್ನುತ್ತಲೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ! ನಿತಿನ್​ 'ರಾಬಿನ್​ಹುಡ್'​ನಲ್ಲಿ ಡೇವಿಡ್​ ವಾರ್ನರ್​ ಮಿಂಚು | David Warner

David Warner: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ, ಡ್ಯಾಶಿಂಗ್ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್, ಇದೀಗ ಕ್ರಿಕೆಟ್​ ಜತೆ ಜತೆಗೆ ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟಿದ್ದಾರೆ. ಭಾರತೀಯ ಸಿನಿಮಾಗಳನ್ನು ವೀಕ್ಷಿಸುವ ಹವ್ಯಾಸ ಹೊಂದಿದ್ದ ವಾರ್ನರ್​, ತೆಲುಗಿನಲ್ಲಿ ಅಲ್ಲು ಅರ್ಜುನ್​ ಅಭಿನಯದ ಪುಷ್ಪ ಚಿತ್ರದ ಪುಷ್ಪರಾಜ್ ಪಾತ್ರಕ್ಕೆ ದೊಡ್ಡ ಅಭಿಮಾನಿಯಾಗಿದ್ದಾರೆ. ಐಪಿಎಲ್​ ಪಂದ್ಯಗಳಲ್ಲಿ ಆಗಾಗ್ಗೆ ಅಲ್ಲು ಅರ್ಜುನ್​ರನ್ನು ಅನುಕರಿಸುವ ಮೂಲಕ ಭಾರತೀಯ ಅಭಿಮಾನಿಗಳನ್ನು ರಂಜಿಸುವ ಡೇವಿಡ್​, ಕಡೆಗೂ ಟಾಲಿವುಡ್​ಗೆ ಲಗ್ಗೆಯಿಟ್ಟಿರುವುದು ಸದ್ಯ ಚಿತ್ರಪ್ರೇಮಿಗಳ ಕುತೂಹಲ ಕೆರಳಿಸಿದೆ.

ಬಹುತೇಕರು ಅಲ್ಲು ಅರ್ಜುನ್ ಅವರ ಮುಂಬರುವ ಯಾವುದಾದರೂ ಚಿತ್ರದಲ್ಲಿ ಡೇವಿಡ್​ ವಾರ್ನರ್​ ನಟಿಸಬಹುದು. ಪ್ರಮುಖ ಪಾತ್ರದಲ್ಲಿ ಅಲ್ಲದೇ ಹೋದರೂ ಅತಿಥಿ ಪಾತ್ರದಲ್ಲಿಯಾದರೂ ಮಿಂಚಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಬದಲಿಗೆ ಅದೇ ಚಿತ್ರರಂಗದ ಸ್ಟಾರ್​ ಹೀರೋ ನಿತಿನ್, ನಟಿ ಶ್ರೀಲೀಲಾ ಅಭಿನಯದ ಕಾಮಿಡಿ ಚಿತ್ರ 'ರಾಬಿನ್‌ಹುಡ್‌'ನಲ್ಲಿ ಡೇವಿಡ್​ ವಾರ್ನರ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಇದೀಗ ಅಧಿಕೃತವಾಗಿದ್ದು, ಡೇವಿಡ್​ ಅವರ ಪೋಸ್ಟರ್​ ಅನಾವರಣಗೊಂಡಿದೆ.

ಜಾಗತಿಕ ಮಟ್ಟದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಡೇವಿಡ್​ ವಾರ್ನರ್​, ಟಿಕ್‌ಟಾಕ್, ಇನ್​ಸ್ಟಾಗ್ರಾಮ್​ ವಿಡಿಯೋ, ರೀಲ್‌ಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ರಾಬಿನ್‌ಹುಡ್‌ ಚಿತ್ರದ ಮೂಲಕ ಭಾರತೀಯ ಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿರುವ ವಾರ್ನರ್, ತೆಲುಗು ಅಭಿಮಾನಿಗಳ ಹೃದಯ ಗೆಲ್ಲಲು ಎದುರುನೋಡುತ್ತಿದ್ದಾರೆ. ಈ ಚಿತ್ರ ಇದೇ ಮಾರ್ಚ್ 28ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ,(ಏಜೆನ್ಸೀಸ್).