ನ್ಯೂಸ್

ನಾಲ್ಕು ದಿನಗಳ ಹಿಂದಷ್ಟೇ ಕಾಲೇಜಿಗೆ ಹಾಜರಾಗಿದ್ದ ಪಿಯು ವಿದ್ಯಾರ್ಥಿನಿ ದುರಂತ ಸಾವು

ದಾವಣಗೆರೆ: ಕಾಲೇಜಿನ ಕಾಂಪೌಂಡ್​ನಿಂದ ಜಾರಿ ಬಿದ್ದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಹರಿಹರದ ಕುರುಬರಹಳ್ಳಿಯ ಸಮೀಪದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜಿನಲ್ಲಿ ನಡೆದಿದೆ.

ಸಿನಿಕ್ಷಾ (16) ಮೃತಪಟ್ಟ ವಿದ್ಯಾರ್ಥಿನಿ. ಕಾಂಪೌಂಡ್​ನಿಂದ ಬಿದ್ದು ಸಿನಿಕ್ಷಾ ತೀವ್ರ ಗಾಯಗೊಂಡಿದ್ದಳು. ತಕ್ಷಣ ಆಕೆಯನ್ನು ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಮೃತ ಸಿನಿಕ್ಷಾ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಶಶಿಕಾಂತ್​ ಎಂಬುವರ ಪುತ್ರಿ. ಮಾನ್ಯತಾ ವಸತಿ ಕಾಲೇಜಿನಲ್ಲಿ ಸೈನ್ಸ್ ವಿಭಾಗದ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದಳು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕಾಲೇಜಿಗೆ ಹಾಜರಾಗಿದ್ದಳು. ಇದೀಗ ಅಕಾಲಿಕವಾಗಿ ಮೃತಪಟ್ಟಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿದ್ಯಾರ್ಥಿನಿ ಆತ್ಮಹತ್ಯೆ

ಇನ್ನು ಈ ಹಿಂದೆಯೂ ಇದೇ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. 2015ರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಮಾಲಾಶ್ರೀ ಬಿರಾದಾರ ಎಂಬ‌ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವೇಳೆ ಮಾಲಾಶ್ರೀ ಪಾಲಕರಿಂದ ಸಂಸ್ಥೆ ವಿರುದ್ಧ ದೂರು ದಾಖಲಾಗಿತ್ತು. ಆಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಂಸ್ಥೆಗೆ ಭೇಟಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. (ದಿಗ್ವಿಜಯ ನ್ಯೂಸ್​)