ನವದೆಹಲಿ: 2023ರಲ್ಲಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಭಾರತೀಯ ಸೇನೆಯ ಹಲವು ಟೆಂಟ್‌ಗಳಲ್ಲಿ ಸಂಭವಿಸಿದ ಬೆಂಕಿಯನ್ನು ನಿಯಂತ್ರಿಸಿ ಭಾರತೀಯ ಸೈನಿಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ಗೆ ಕೆಲ ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು. ಇದೀಗ ಈ ವಿಚಾರ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದು, ನೆಕ್ಸ್ಟ್ ಆಫ್ ಕಿನ್ ನಿಯಮದಡಿ ಮರುಪರಿಶೀಲಿಸುವಂತೆ ಅಂಶುಮಾನ್ ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ದಲ್ಪತ್ ಗ್ರಾಮದ ನಿವಾಸಿಯಾದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ತನ್ನ ಜೀವವನ್ನು ತ್ಯಾಗ ಮಾಡುವ ಮೂಲಕ ನಾಲ್ವರು ಸೈನಿಕರ ಜೀವವನ್ನು ಉಳಿಸಿದ್ದರು. ಕೀರ್ತಿ ಚಕ್ರವು ಅಂಶುಮಾನ್ ಅವರ ಕುಟುಂಬಕ್ಕೆ ನೀಡಲಾದ ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಇದೀಗ ಈ ಪ್ರಶಸ್ತಿ ನೀಡಿರುವ ಬಗ್ಗೆ ಮರುಪರಿಶೀಲಿಸುವಂತೆ ಅಂಶುಮಾನ್ ಪೋಷಕರು ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಂಶುಮಾನ್ ಪೋಷಕರಾದ ರವಿ ಪ್ರತಾಪ್ ಸಿಂಗ್ ಹಾಗೂ ಮಂಜು ಸಿಂಗ್, ಮಗ ಮೃತಪಟ್ಟ ಬಳಿಕ ಸೊಸೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಆಕೆ ಮನೆಯ ವಿಳಾಸವನ್ನು ಬದಲಾಯಿಸಿದ್ದು, ಆಕೆ ನಮ್ಮೊಂದಿಗೆ ವಾಸಿಸುತ್ತಿಲ್ಲ. ಮಗನ ಸ್ಮರಣಿಕೆಯನ್ನು ಸೊಸೆಗೆ ನೀಡಲಾಗಿದೆ. ಆತನ ನೆನಪಿಗೆ ನಮ್ಮೊಂದಿಗೆ ಯಾವುದೇ ಕುರುಹುಗಳಿಲ್ಲ. ಸರ್ಕಾರ ಈ ಬಗ್ಗೆ ಮರುಪರಿಶೀಲಿಸಬೇಕು ಎಂದು ವಿನಂತಿಸಿದ್ದಾರೆ.
ಅಂಶುಮಾನ್ ಪೋಷಕರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ನೆಕ್ಸ್ಟ್ ಆಫ್ ಕೀನ್ ನಿಯಮದಲ್ಲಿ ಬದಲಾವಣೆ ತರಲು ಸರ್ಕಾರದ ಮೇಲೆ ಒತ್ತೆ ಹೇರುವಂತೆ ಅವರು ಆಗ್ರಹಿಸಿದ್ದಾರೆ.
ಒಬ್ಬ ವ್ಯಕ್ತಿಯು ಸೈನ್ಯಕ್ಕೆ ಸೇರಿದಾಗ, ಅವನ ಹೆತ್ತವರು ಅಥವಾ ಪೋಷಕರ ಹೆಸರುಗಳನ್ನು ನೆಕ್ಸ್ಟ್ ಆಫ್ ಕೀನ್ನಲ್ಲಿ ದಾಖಲಿಸಲಾಗುತ್ತದೆ. ಅದಾಗ್ಯೂ ಕೆಡೆಟ್ ಅಥವಾ ಅಧಿಕಾರಿ ಮದುವೆಯಾದಾಗ ಅವರ ಪತ್ನಿಯ ಹೆಸರನ್ನು ನೆಕ್ಸ್ಟ್ ಆಫ್ ಕೀನ್ನಲ್ಲಿ ದಾಖಲಿಸಲಾಗುತ್ತದೆ.