ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಹಚರರು ಜೈಲು ಪಾಲಾಗಿದ್ದು, ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಕೋರ್ಟ್ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನಟ ದರ್ಶನ್ ಮತ್ತು ಸಹಚರರನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದ್ದು, ವಿಚಾರಣಧೀನ ಕೈದಿ ನಂಬರ್ ನೀಡಲಾಗಿದೆ.
ಜೈಲು ಅಧಿಕಾರಿಗಳು ನಟ ದರ್ಶನ್ಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ನೀಡಿದ್ದಾರೆ. ವಿಚಾರಣಾಧೀನ (UTP) ಕೈದಿ ನಂಬರ್- 6106 ಅನ್ನು ನೀಡಲಾಗಿದೆ. ಭದ್ರತೆ ದೃಷ್ಟಿಯಿಂದ ನಟ ದರ್ಶನ್ರನ್ನು ವಿಶೇಷ ಬ್ಯಾರಕ್ನಲ್ಲಿ ಇರಿಸಲಾಗಿದ್ದು, ಇತರೆ ಕೈದಿಗಳಿಂದ ಅಪಾಯವಿರುವ ಆರೋಪಿಗಳನ್ನು ಈ ಬ್ಯಾರಕ್ನಲ್ಲಿ ಇಡಲಾಗುತ್ತಿದೆ. ಇದೀಗ ದರ್ಶನ್ರನ್ನು ಮೂರನೇ ಬ್ಯಾರಕ್ನಲ್ಲಿ ಇರಿಸಲಾಗಿದೆ.
13 ವರ್ಷಗಳ ಬಳಿಕ ನಟ ದರ್ಶನ್ ಮತ್ತೊಮ್ಮೆ ಜೈಲುಪಾಲಾಗಿದ್ದು, ರಾತ್ರ ಊಟಕ್ಕೆ ಮುದ್ದೆ, ಚಪಾತಿ, ಅನ್ನ ಸಾಂಬಾರ್ ಮತ್ತು ಮಜ್ಜಿಗೆ ನೀಡಲಾಗಿತ್ತು ಎಂದು ವರದಿಯಾಗಿದೆ. ರಾತ್ರಿ ಸರಿಯಾಗಿ ಊಟ ಮಾಡದ ದರ್ಶನ್ ತಡವಾಗಿ ನಿದ್ರೆಗೆ ಜಾರಿದ್ದಾರೆ. ಬೆಳಗ್ಗೆ 6:30ರ ಸುಮಾರಿಗೆ ಎದ್ದ ದರ್ಶನ್ ಸೆಲ್ನಲ್ಲೇ ಕುಳಿತಿದ್ದಾರೆ. ಬೆಳಗಿನ ಉಪಹಾರಕ್ಕೆ ಪಲಾವ್ ನೀಡಲಾಗಿದೆ ಎಂದು ವರದಿಯಾಗಿದೆ. ರೇಣುಕಸ್ವಾಮಿ ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಬಂಧನವಾಗಿ 13 ದಿನಗಳಾಗಿದ್ದು, ಅವರ ತೂಕದಲ್ಲಿ ಇಳಿಕೆ ಕಂಡಿದ್ದಾರೆ ಮತ್ತು ಬಿಪಪಿಯಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ನಟ ದರ್ಶನ್ ಅವರು ಸುಮಾರು 1 ರಿಂದ 2 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದು, ಬಿಪಿ ಕೂಡ ಏರುಪೇರಾಗಿದೆ ಎಂದು ತಿಳಿದು ಬಂದಿದೆ. ಶ್ರುಕವಾರದಂದು ಪರಿಶೀಲಿಸಿದಾಗ ದರ್ಶನ್ ತೂಕದಲ್ಲಿ ಇಳಿಕೆಯಾಗಿದ್ದು, ಬಿಪಿ 130/90ರಲ್ಲಿ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರದ ಮಹಿಳಾ ವಿಭಾಗದ ಡಿ ಬ್ಯಾರಕ್ನಲ್ಲಿ ಇರಿಸಲಾಗಿದೆ. ಪವಿತ್ರಾಗೆ 6024 ಸಂಖ್ಯೆಯನ್ನು ನೀಡಲಾಗಿತ್ತು. ಇಂದು ಪೊಲೀಸ್ ಕಸ್ಟಡಿ ಅಂತ್ಯವಾದ ಆರೋಪಿಗಳಿಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜುಲೈ 4 ರವರೆಗೆ ದರ್ಶನ್ ಮತ್ತು ಗ್ಯಾಂಗ್ ಜೈಲಿನಲ್ಲಿರಲಿದೆ.