ಬೆಂಗಳೂರು: ಮೇ. 29 ಕನ್ನಡ ಚಿತ್ರರಂಗ, ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಹಬ್ಬದ ಸಂಭ್ರಮ ಇದ್ದಂತೆ. ಹೌದು ನಾಳೆ (ಮೇ.29) ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ ಅಂಬರೀಶ್ ಅವರು ನಮ್ಮ ಜೊತೆಗಿಲ್ಲ. ಆದರೆ ಅವರ ಅಭಿಮಾನಿಗಳು ಭಾರವಾದ ಮನಸ್ಸಿನಿಂದಲೇ ಆಚರಿಸುತ್ತಾರೆ.
ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಅವರ ವಿಶೇಷ ಪೋಸ್ಟರ್ ರಿಲೀಸ್ ಮಾಡಿ ದರ್ಶನ್ ಶುಭಕೋರಿದ್ದಾರೆ. ಎಕ್ಸ್‌ನಲ್ಲಿ ಸ್ಪೆಷಲ್ ಆಗಿ ಅಂಬರೀಶ್ ಅಪ್ಪಾಜಿಗೆ ದರ್ಶನ್ ಶುಭಕೋರಿದ್ದಾರೆ.
ಅಂಬರೀಶ್ ಅವರನ್ನು ನೆನೆದು ಟ್ವೀಟ್ ಮಾಡಿರುವ ದರ್ಶನ್ ‘ನಮ್ಮೆಲ್ಲರ ಅಚ್ಚುಮೆಚ್ಚಿನ ಸಹೃದಯಿ, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಮೂಡಿಬಂದಿರುವ CDP ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟ ಅಭಿಮಾನಿ ಸಮೂಹಕ್ಕೆ ಧನ್ಯವಾದಗಳು. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ರೆಬೆಲ್ ಸ್ಟಾರ್ ಎಂದು ಡಿ ಬಾಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬದಂದು ಅವರ ಸ್ಮಾರಕಕ್ಕೆ ಅಭಿಮಾನಿಗಳು ನಾಳೆ (ಮೇ 29) ಭೇಟಿ ನೀಡಲಿದ್ದಾರೆ. ಅಂಬಿ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮಿಸಲಿದ್ದಾರೆ. ಅಂಬರೀಶ್ ಹುಟ್ಟುಹಬ್ಬದಂದು ವಿವಿಧ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸಿದ್ದಾರೆ.
ಅಂಬಿ ಹುಟ್ಟುಹಬ್ಬದಂದು ಸಾಕಷ್ಟು ಅಭಿಮಾನಿಗಳು ಅವರ ಮನೆಮುಂದು ಜಮಾಯಿಸುತ್ತಿದ್ದರು. ಹೂ, ಹಾರ, ಕೇಕ್, ಗಿಫ್ಟ್ಗಳನ್ನು ನೀಡುತ್ತಾ ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ ಅಂಬರೀಶ್ ಅಗಲಿಕೆ ನಂತರವೂ ಅಭಿಮಾನಿಗಳು ಅವರನ್ನು ಪೂಜಿಸುತ್ತಾ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುವ ಮೂಲಕ ಅಭಿಮಾನ ತೋರಿಸುತ್ತಿದ್ದಾರೆ.