ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆಯ ತೀರ್ಪು ಇಂದೇ (ಡಿ.13) ಹೊರಬೀಳಲಿದ್ದು, ದರ್ಶನ್ ಸೇರಿದಂತೆ ಏಳು ಆರೋಪಿಗಳಲ್ಲಿ ಚಿಂತೆ ಹೆಚ್ಚಾಗಿದೆ. ದಾಸನ ಪರ ಕೋರ್ಟ್ನಲ್ಲಿ ಪ್ರಬಲವಾಗಿ ವಾದ ಮಂಡಿಸಿರುವ ಸಿ.ವಿ. ನಾಗೇಶ್ ಒಂದೆಡೆಯಾದರೆ, ಆರೋಪಿ ವಿರುದ್ಧ ಎಸ್ಪಿಪಿ ಪ್ರಸನ್ನ ಕುಮಾರ್ ಅವರ ಗಟ್ಟಿ ವಾದ ಮತ್ತೊಂದೆಡೆ. ಇವರಿಬ್ಬರ ವಾದ-ಪ್ರತಿವಾದ ಆಲಿಸಿರುವ ಹೈಕೋರ್ಟ್ನ ತೀರ್ಪು ಏನಾಗಿರಲಿದೆ ಎಂಬುದೇ ಸದ್ಯ ಕುತೂಹಲ.
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳಿಗೂ ಜಾಮೀನಿನ ತೀರ್ಪು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ಪೀಠ ನೀಡುವ ತೀರ್ಪಿನ ಮೇಲೆ ಎಲ್ಲರ ಚಿತ್ತ ಮೂಡಿದ್ದು, ದರ್ಶನ್ಗೆ ಬೇಲ್ ಸಿಗದೆ ಹೋದರೆ ಮುಂದೇನು ಎಂಬ ಪ್ರಶ್ನೆ ಇದೀಗ ಚರ್ಚೆಯಲ್ಲಿದೆ. ಜಾಮೀನು ಸಿಕ್ಕರೆ 'ಸಾರಥಿ' ಬಾಳಲ್ಲಿ ನೆಮ್ಮದಿಯ ಅಲೆ ಬೀಸಲಿದೆ. ಅದೇ ತೀರ್ಪು ವಿರುದ್ಧವಾದರೆ ನರಕಯಾತನೆ ಮುಂದುವರಿಯಲಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್ ಜಾಮೀನನ್ನು ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ಪೀಠವು ವಜಾಗೊಳಿಸಿದರೆ, ದರ್ಶನ್ಗೆ ಉಳಿದಿರುವ ಆಯ್ಕೆ ಮತ್ತೊಮ್ಮೆ ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸುವುದು. ಅದು ಸರಿ ಅನಿಸಲಿಲ್ಲ ಎಂದಾದರೆ ನೇರವಾಗಿ ಸುಪ್ರೀಂಕೋರ್ಟ್ಗೆ ಬೇಲ್ ಅರ್ಜಿ ಸಲ್ಲಿಸುವುದು. ಇವೆರಡನ್ನು ಬಿಟ್ಟರೆ ಇನ್ಯಾವ ಮಾರ್ಗವು ದರ್ಶನ್ ಮುಂದಿಲ್ಲ ಎಂಬುದು ಗಮನಾರ್ಹ.
ಪ್ರಸ್ತುತ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ಗೆ ಇಂದು ಜಾಮೀನು ಅರ್ಜಿ ವಜಾಗೊಂಡರೆ, ಜೈಲುವಾಸ ಶಿಕ್ಷೆ ಎಂದಿನಂತೆ ಮುಂದುವರಿಯಲಿದೆ. ಹೈಕೋರ್ಟ್ನಲ್ಲಿ ಮತ್ತೊಮ್ಮೆ ಮೇಲ್ಮನವಿ ಅಥವಾ ಸುಪ್ರೀಂಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ಇಚ್ಛಿಸದಿದ್ದರೆ, ಆರೋಪಿಯ ಶಿಕ್ಷೆ ಮುಂದುವರಿಕೆ ಆಗಲಿದೆ. ಆಗ ಈ ಪ್ರಕರಣದಲ್ಲಿ ಕೋರ್ಟ್ ತೀರ್ಪು ಯಾವಾಗ ಬರಲಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿರುತ್ತದೆ.