ತಿರುವನಂತಪುರ: ಕೊವಿಡ್-19 ಪ್ರಸರಣ ಹೆಚ್ಚುತ್ತಿದೆ. ಅದರ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರಗಳು ಜಾರಿಗೊಳಿಸಿರುವ ಲಾಕ್ಡೌನ್ ನಿಯಮಗಳನ್ನು ಅದೆಷ್ಟೋ ಜನರು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದ ವೈರಸ್ ಹಬ್ಬುವುದೂ ಹೆಚ್ಚುತ್ತಿದೆ.
ಇದೀಗ ಲಾಕ್ಡೌನ್ ನಿಯಮಗಳನ್ನೆಲ್ಲ ಬದಿಗೊತ್ತಿ, ಭರ್ಜರಿ ಡ್ಯಾನ್ಸ್ ಪಾರ್ಟಿ ನಡೆಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಡುಕ್ಕಿ ಜಿಲ್ಲೆಯ ಉಡುಂಬಂಚೋಲಾದಲ್ಲಿರುವ ಖಾಸಗಿ ರೆಸಾರ್ಟ್ವೊಂದರಲ್ಲಿ ಮಂಗಳವಾರ ಬೆಲ್ಲಿ ಡ್ಯಾನ್ಸ್ ಪಾರ್ಟಿ ನಡೆಸಿದವರನ್ನೆಲ್ಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಪಾರ್ಟಿಯಲ್ಲಿ ಉಕ್ರೇನ್ ದೇಶದ ನೃತ್ಯಗಾರ್ತಿಯೂ ಇದ್ದರು. ಬೆಲ್ಲಿ ಡ್ಯಾನ್ಸ್ ಪಾರ್ಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಯಾವುದೋ ಒಂದು ಸಂಸ್ಥೆಯ ಉದ್ಘಾಟನೆ ಸಮಾರಂಭದ ನಿಮಿತ್ತ ಡ್ಯಾನ್ಸ್ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಭಾಗವಹಿಸಿದವರು ಕೊವಿಡ್-19 ಪ್ರೊಟೊಕಾಲ್ನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದರು.
ಖಾಸಗಿ ರೆಸಾರ್ಟ್ ಮ್ಯಾನೇಜರ್ ಸೇರಿ ಒಟ್ಟು ಆರು ಮಂದಿಯನ್ನು ನಾವೀಗ ಬಂಧಿಸಿದ್ದೇವೆ. ಸಮಾರಂಭದಲ್ಲಿ ಇಷ್ಟೇ ಅಲ್ಲ. ಇನ್ನೂ ಹಲವರು ಇದ್ದರು. ಅವರನ್ನೂ ಬಂಧಿಸಲಾಗುವುದು. ಎರ್ನಾಕುಲಂ ಮತ್ತು ಕೊಚ್ಚಿಯಲ್ಲಿ ವಾಸವಾಗಿರುವ ಉಕ್ರೇನ್ ದೇಶದವರೊಬ್ಬರು ಈ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ಸೇನೆ ಹಿಂದೆ ಸರಿದರೂ ಕಾಂಗ್ರೆಸ್ಗಿಲ್ಲ ಸಮಾಧಾನ; 2013ರಲ್ಲಿ ಮೋದಿಯವರು ಮಾಡಿದ್ದ ಟ್ವೀಟ್ಗೆ ಈಗ ಉತ್ತರ ಬೇಕಂತೆ…
ಪಾರ್ಟಿಯಲ್ಲಿ ಭಾಗವಹಿಸಿದ್ದವರ ವಿವರವನ್ನು ಸಂಗ್ರಹಿಸಲಾಗುತ್ತಿದೆ. ನಮಗೆ ಪಾರ್ಟಿಯ ಬಗ್ಗೆ ಯಾರೂ ದೂರು ಕೊಟ್ಟಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ನೋಡಿಕೊಂಡು ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್)