ಬೆಂಗಳೂರು: ದೇವರು-ದೇವಸ್ಥಾನಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಕಿಡಿಗೇಡಿತನಕ್ಕೆ ಈಗ ಇನ್ನೊಂದು ಪ್ರಕರಣ ಸೇರಿಕೊಂಡಿದೆ. ನಾಗದೇವರ ಮೂರ್ತಿಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ, ಹಿಂದೂಗಳ ಭಾವನೆಗಳ ಧಕ್ಕೆ ತಂದಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಚಿಕ್ಕತೋಗೂರು ಗೇಟ್ ಬಳಿ ಈ ಪ್ರಕರಣ ನಡೆದಿದೆ. ಹೊಸೂರು ಬೆಂಗಳೂರು ಮುಖ್ಯರಸ್ತೆಯ ಚಿಕ್ಕತೋಗೂರಿನ ರಸ್ತೆಪಕ್ಕದ ನಾಗದೇವರ ಬನದಲ್ಲಿನ ಮೂರ್ತಿಯನ್ನು ಕಿಡಿಗೇಡಿಗಳು ನಿನ್ನೆ ರಾತ್ರಿ ವಿರೂಪಗೊಳಿಸಿದ್ದಾರೆ.
ಸುಮಾರು 30 ವರ್ಷಗಳಿಂದ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ. ಪ್ರತಿದಿನವೂ ಪೂಜೆ ನಡೆಯುವ ಈ ಜಾಗದಲ್ಲಿ ನಿನ್ನೆ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದು ದೇವರ ಮೂರ್ತಿಯನ್ನು ಒಡೆದು ಹಾಕಿದ್ದಾರೆ. ದೇವರ ಮೂರ್ತಿಯನ್ನು ವಿರೂಪಗೊಳಿಸಿದ್ದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಿಡಿಕಾರಿದ್ದಾರೆ. ಸ್ಥಳಕ್ಕೆ ಬಜರಂಗದಳ ಹಾಗೂ ಹಿಂದೂ ಪರ ಹೋರಾಟಗಾರರು ಭೇಟಿ ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರೂ ಸ್ಥಳಕ್ಕೆ ಧಾವಿಸಿದ್ದಾರೆ.