ನ್ಯೂಸ್

80 ವರ್ಷಗಳ ನಂತರ ಪೊಲೀಸರ ಭದ್ರತೆಯೊಂದಿಗೆ ದೇವಾಲಯ ಪ್ರವೇಶಿಸಿದ 300 ಜನರು!

ತಮಿಳುನಾಡು: ಪುರುಷರು, ಮಹಿಳೆಯರು, ಮಕ್ಕಳು ಸೇರಿಂದೆ ಸುಮಾರು 300 ಜನ ದಲಿತರು 80 ವರ್ಷಗಳ ನಂತರ ಪೊಲೀಸರ ಭದ್ರತೆಯೊಂದಿಗೆ ದೇವಸ್ಥಾನ ಪ್ರವೇಶಿಸಿದ್ದಾರೆ. ತಿರುವಣ್ಣಾಮಲೈನ ತಂದರಂಪಟ್ಟುದಲ್ಲಿರುವ ಮುತ್ತು ಮಾರಿಯಮ್ಮನ್ ದೇವಾಲಯದಲ್ಲಿ 12 ದಿನಗಳ ಕಾಲ ಪೊಂಗಲ್ ಹಬ್ಬ ಆಚರಣೆ ಆಯೋಜಿಸಲಾಗಿತ್ತು. ಇದೀಗ ಪೊಂಗಲ್ ಆಚರಣೆಯ ನಿಮಿತ್ತ ದಲಿತರು ದೇವಾಲಯದೊಳಕ್ಕೆ ಆಗಮಿಸಿದ್ದಾರೆ.

ಹಿಂದು ಧಾರ್ಮಿಕ ಮತ್ತು ಧತ್ತಿ ಮಂಡಳಿಯ ಅಡಿಯಲ್ಲಿ ಮುತ್ತು ಮಾರಿಯಮ್ಮನ್ ದೇವಾಲಯ ಬರುತ್ತದೆ. ಕಳೆದ 80 ವರ್ಷಗಳಿಂದ ದಲಿತರಿಗೆ ಈ ದೇವಾಲಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ಈ ಬಾರಿ ದಲಿತರಿಗೂ ಅವಕಾಶ ನೀಡಬೇಕು ಎಂದು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ಅದರಂತೆ ಪೊಂಗಲ್ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ದಲಿತರನ್ನು ಆಹ್ವಾನಿಸಲಾಗಿದೆ. ಹೀಗಾಗಿ ಕಳೆದ ಆದಿತ್ಯವಾರ (ಜ.29) ಪೊಲೀಸರ ಭದ್ರತೆಯೊಂದಿಗೆ ದಲಿತರು ದೇವಾಲಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.

ಹಲವು ದಲಿತ ಕುಟುಂಬಗಳು ಹೂಮಾಲೆ ಮತ್ತು ವಿವಿಧ ವಸ್ತುಗಳನ್ನು ದೇವಸ್ಥಾನಕ್ಕೆ ತಂದು ಪೊಂಗಲ್ ಬೇಯಿಸಿ, ಹಬ್ಬದಲ್ಲಿ ಎಲ್ಲರ ಜತೆಗೂ ಕೂಡಿಕೊಂಡಿದ್ದಾರೆ. ದಲಿತರಿಗೆ ಅವಕಾಶ ನೀಡಿದ್ದನ್ನು ಕೆಲವರು ವಿರೋಧಿಸಿ, ದೇವಾಲಯದ ಆವರಣದಲ್ಲಿ ಪ್ರತಿಭಟನೆಗೂ ಸಿದ್ಧರಾಗಿದ್ದರು. ಹೀಗಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ ದಲಿತರ ಪರವಾಗಿ ಧ್ವನಿ ಎತ್ತಿದ ದೇವಾಲಯದ ಆಡಳಿತ ಮಂಡಳಿ, ಸಮಾಜದಲ್ಲಿ ಉಳಿದವರಂತೆ ದಲಿತರಿಗೂ ದೇವಾಲಯ ಪ್ರವೇಶಿಸುವ ಅವಕಾಶ ಇದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ ಎಂದು ವರದಿಯಾಗಿದೆ.

ಮಾಹಿತಿಯಂತೆ ತಮಿಳುನಾಡಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ದಲಿತರು ದೇವಾಲಯ ಪ್ರವೇಶಿಸಿರುವುದು ಇದು ಮೂರನೇ ಘಟನೆ ಎಂದು ಹೇಳಲಾಗಿದೆ. (ಏಜೆನ್ಸೀಸ್)