ನ್ಯೂಸ್

ಆರು ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವತಿ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ ಪಾಲಕರು!

ಕರ್ನೂಲ್​: ಅಂತರ್ಜಾತಿ ಮದುವೆಯಾದ 30 ವರ್ಷದ ದಲಿತ ಫಿಸಿಯೋಥೆರಪಿಸ್ಟ್ ಪತ್ನಿಯ ಕುಟುಂಬವರಿಂದಲೇ ಬರ್ಬರವಾಗಿ ಕೊಲೆಯಾಗಿರುವ ದುರ್ಘಟನೆ​ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಅದೊನಿ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಮೃತನನ್ನು ಆ್ಯಡಮ್​ ಸ್ಮಿತ್​ ಎಂದು ಗುರುತಿಸಲಾಗಿದೆ. ಹೈದರಾಬಾದಿನಲ್ಲಿ ಆರ್ಯ ಸಮಾಜದಲ್ಲಿ ಮಹೇಶ್ವರಿ ಎಂಬ ಯುವತಿಯನ್ನು ಸ್ಮಿತ್​ 6 ತಿಂಗಳ ಹಿಂದೆ ಮದುವೆಯಾಗಿದ್ದರು. ಇಬ್ಬರು ಸಹ ಬೇರೆ ಬೇರೆ ಸಮುದಾಯದವರಾಗಿದ್ದರು. ಯುವಕ ದಲಿತನಾಗಿದ್ದರಿಂದ ಯುವತಿ ಮನೆಯವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ.

ವಿರೋಧದ ನಡುವೆಯೂ ಮದುವೆಯಾಗಿದ್ದ ಹೊಸ ಜೋಡಿ ಕೆಲವು ತಿಂಗಳಿಂದ ಅದೊನಿ ಪಟ್ಟಣದ ಕೃಷ್ತಪ್ಪ ನಗರದಲ್ಲಿ ವಾಸವಿದ್ದರು. ತಮ್ಮ ಮಾತನ್ನು ಧಿಕ್ಕರಿಸಿ ಯುವಕನನ್ನು ಮಹೇಶ್ವರಿ ಮದುವೆಯಾಗಿದ್ದರಿಂದ ಆಕೆಯ ಕುಟುಂಬದ ಯಾರೋಬ್ಬರು ಮಾತನಾಡಿಸುತ್ತಿರಲಿಲ್ಲ.

ನವಜೋಡಿಯ ವೈವಾಹಿಕ ಜೀವನದ ಬಂಡಿ ಯಶಸ್ಸಿನ ಪಥದಲ್ಲಿ ಸಾಗುತ್ತಿರುವಾಗಲೇ ದುರಂತ ದಿನವೊಂದು ಮಹೇಶ್ವರಿಗೆ ಕಾದಿತ್ತು. ಸ್ಮಿತ್​ ಕೆಲಸ ಮುಗಿಸಿ ಮನೆಗೆ ಮರಳುವಾಗ ಬೈಕ್​ ಅಡ್ಡಹಾಕಿದ ಕೆಲವು ದುಷ್ಕರ್ಮಿಗಳು ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದಾರೆ. ಬಂಡೆಯಿಂದ ಸ್ಮಿತ್​ ತಲೆಯನ್ನು ಜಜ್ಜಿ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.

ಕೊಲೆಗೆ ತಮ್ಮ ಮನೆಯವರೇ ಕಾರಣ ಎಂದು ಸ್ಮಿತ್​ ಪತ್ನಿ ಮಹೇಶ್ವರಿ ದೂರಿದ್ದಾಳೆ. ಅಲ್ಲದೆ, ತಮ್ಮ ಮದುವೆಗೆ ಮನೆಯವರು ಒಪ್ಪಿರಲಿಲ್ಲ ಎಂದು ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೊಲೆ ಸಂಬಂಧಿಸಿದ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)