ನ್ಯೂಸ್

ಕೇರಳದ ಬಂಪರ್​ ಲಾಟರಿ ಗೆದ್ದ ಉಪ್ಪಿನಂಗಡಿಯ ಮೇಸ್ತ್ರಿ: ಬಹುಮಾನದ ಮೊತ್ತ ಹುಬ್ಬೇರಿಸುವಂತಿದೆ!

ದಕ್ಷಿಣ ಕನ್ನಡ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕರ್ನಾಟಕ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಕೇರಳದಲ್ಲಿ ಸರ್ಕಾರವೇ ಲಾಟರಿಯನ್ನು ನಡೆಸುತ್ತದೆ. ಇತ್ತೀಚೆಗೆ ಕೇರಳ ಓಣಂ ಹಬ್ಬ ಆಚರಿಸಿತು. ಈ ವೇಳೆ ಪ್ರತಿವರ್ಷದಂತೆ ಬಂಪರ್​ ಲಾಟರಿ ಆಯೋಜಿಸಿತ್ತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್​ ಖರೀದಿ ಮಾಡಿದ್ದರು. ಒಂದು ಟಿಕೆಟ್​ಗೆ 500 ರೂ. ನಿಗದಿ ಮಾಡಲಾಗಿತ್ತು. ಸೆ. 22ರಂದು ಪ್ರಕಟವಾದ ಫಲಿತಾಂಶದಲ್ಲಿ ತಮಿಳುನಾಡಿನ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ.

ಇದೇ ಓಣಂ ಲಾಟರಿಯಲ್ಲಿ ದಕ್ಷಿಣ ಕನ್ನಡದ ಉಪ್ಪಿನಂಗಡಿ ಮೂಲದ ಮೇಸ್ತ್ರಿಗೂ ಅದೃಷ್ಟ ಒಲಿದಿದೆ. ಇಳಂತಿಲ ನಿವಾಸಿ ಚಂದ್ರಯ್ಯ ಎಂಬುವರು ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಓಣಂ ಲಾಟರಿ ಟಿಕೆಟ್ ಖರೀದಿಸಿದ್ದರು. ಇದೀಗ ಆ ಟಿಕೆಟ್​ಗೆ ಚಂದ್ರಯ್ಯ ಅವರು 50 ಲಕ್ಷ ರೂ. ಬಹುಮಾನವನ್ನು ಗೆದ್ದಿದ್ದಾರೆ.

ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ 500 ರೂ. ಕೊಟ್ಟು ಚಂದ್ರಯ್ಯ ಟಿಕೆಟ್ ಖರೀದಿಸಿದ್ದರು. ಇದೀಗ ಬಂಪರ್​ ಬಹುಮಾನ ಬಂದಿದ್ದು, ಚಂದ್ರಯ್ಯ ಅವರ ಬದುಕೇ ಬದಲಾಗಿದೆ. ಚಂದ್ರಯ್ಯ ಲಾಟರಿ ಗೆದ್ದಿರುವ ಸುದ್ದಿ ಕೇಳಿ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸುತ್ತಿದ್ದಾರೆ. ಚಂದ್ರಯ್ಯ ಅವರು ಲಾಟರಿ ಗೆದ್ದ ಖುಷಿಯಲ್ಲಿದ್ದು, ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬ ಚಿಂತನೆಯಲ್ಲಿ ಮುಳುಗಿದ್ದಾರೆ.