ಬೆಂಗಳೂರು: DK ಶಿವಕುಮಾರ್ ಅವರು ಆತುರದಲ್ಲೂ ಇಲ್ಲ, ಆತಂಕದಲ್ಲೂ ಇಲ್ಲ” ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು.ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ನಿರ್ದೇಶನವಿದ್ದರೂ ಸಿಎಂ ಮೂರು ಬಾರಿ ನಾನೇ 5 ವರ್ಷ ಸಿಎಂ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಗಳವಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು, ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೂಡ ಈಗಾಗಲೇ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ಅವರು ನಾಯಕತ್ವದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ. ಆದರೂ ಮಾಧ್ಯಮಗಳಿಗೆ ಯಾಕೆ ಗೊಂದಲವಿದೆ ಎಂದು ಗೊತ್ತಿಲ್ಲ ಎಂದರು.
ಶಿವಕುಮಾರ್ ಅವರು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಪಕ್ಷದ ಕಾರ್ಯಕರ್ತನಾಗಿ ಮುನ್ನಡೆಸುತ್ತಿದ್ದಾರೆ. ಪಕ್ಷದ ಸೂಚನೆಯಂತೆ ಅವರು ಕೆಲಸ ಮಾಡುತ್ತಿದ್ದಾರೆ. ಇದರ ಹೊರತಾಗಿ ಹೆಚ್ಚಿನ ವಿಚಾರ ಏನೂ ಇಲ್ಲ. ಸಧ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಪದೇ ಪದೆ ಈ ವಿಚಾರ ಯಾಕೆ ಚರ್ಚೆಯಾಗುತ್ತಿದೆ ಗೊತ್ತಿಲ್ಲ ಎಂದರು.
“ಸಿದ್ದರಾಮಯ್ಯ ಅವರು ಹಿರಿಯ ನಾಯಕರು. ರಾಜಕೀಯದಲ್ಲಿ ನಿವೃತ್ತಿ ಇಲ್ಲ. ರಾಜಕೀಯ ಇಚ್ಛಾಶಕ್ತಿ ಇರಬೇಕು. ಮುಖ್ಯಮಂತ್ರಿಗಳಿಗೆ ಇಚ್ಛಾಶಕ್ತಿ ಇದೆ. ಹೀಗಾಗಿ ಅವರು ಕೆಲವು ವಿಚಾರವನ್ನು ನಿಮ್ಮ ಜೊತೆ ಹಂಚಿಕೊಂಡಿರಬಹುದು” ಎಂದು ತಿಳಿಸಿದರು.
ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಶಾಸಕರ ಬೆಂಬಲ ಕೇಳುವ ಸಮಯವಲ್ಲ. ಸಿದ್ದರಾಮಯ್ಯ ಅವರು 2 ವರ್ಷಗಳಿಂದ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರು ಮುಂದುವರಿಯುತ್ತಿರುವಾಗ ಈ ವಿಚಾರ ಚರ್ಚೆಯಾಗುತ್ತಿರುವ ಬಗ್ಗೆ ನಮಗೆ ಗೊತ್ತಿಲ್ಲ. ನೀವು ಈ ವಿಚಾರ ಚರ್ಚೆ ಮಾಡುತ್ತಿರುವವರನ್ನೇ ಕೇಳಿ. ಶಿವಕುಮಾರ್ ಅವರದ್ದು ಬಲಾಬಲ ಪ್ರದರ್ಶನ ಮಾಡುವ ವ್ಯಕ್ತಿತ್ವವಿಲ್ಲ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಕಾಂಗ್ರೆಸ್ ವರಿಷ್ಠರಿಗೆ ಗೌರವ ನೀಡುವ ವ್ಯಕ್ತಿತ್ವ ಹೊಂದಿರುವವರು. ಅವರು ಬೇರೆಯವರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
75 ವರ್ಷಕ್ಕೆ ನಿವೃತ್ತಿ ಪಡೆಯಬೇಕು ಎಂದು ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆ ಬಗ್ಗೆ ಕೇಳಿದಾಗ, “ರಾಜಕಾರಣದಲ್ಲಿ ನಿವೃತ್ತಿ ಇಲ್ಲ ಎಂದು ನಾನು ಹೇಳಿದ್ದೇನೆ. ರಾಜಕೀಯ ಇಚ್ಛಾಶಕ್ತಿ ಜತೆಗೆ ಅವರವರು ಹಾಕಿಕೊಂಡಿರುವ ಲಕ್ಷ್ಮಣ ರೇಖೆಗಳನ್ನು ದಾಟುವುದು ಹೇಗೆ ಎಂಬುದು ಮುಖ್ಯ. ಯಾವಾಗಲೂ ಇನ್ನೊಬ್ಬರಿಗೆ ಮಾರ್ಗದರ್ಶಕರಾಗಿ ಮಾದರಿಯಾಗಿರಬೇಕು. ಈ ರೀತಿ ದಿಟ್ಟ ಹೆಜ್ಜೆ ಇಟ್ಟಾಗ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿಸಿದರು. (ಏಜೆನ್ಸೀಸ್)