

ಅಫ್ಘಾನಿಸ್ತಾನ: ( Child marriage ) ಅಫ್ಘಾನಿಸ್ತಾನದಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿಯನ್ನು ಮದುವೆಯಾದ ಘಟನೆ ಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದ ಮಾರ್ಜಾ ಜಿಲ್ಲೆಯಲ್ಲಿ ನಡೆದಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ತಾಲಿಬಾನ್ ಮಧ್ಯಪ್ರವೇಶಿದೆ.
ಅಫ್ಘಾನಿಸ್ತಾನದಲ್ಲಿ 45 ವರ್ಷದ ವ್ಯಕ್ತಿ ಜತೆ 6 ವರ್ಷದ ಬಾಲಕಿಗೆ ಬಲವಂತವಾಗಿ ಮದುವೆ ಮಾಡಿದ್ದಾರೆ. ಆ ಬಾಲಕಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದರೊಂದಿಗೆ, ತಾಲಿಬಾನ್ ಮಧ್ಯಪ್ರವೇಶಿಸಿ, ಹುಡುಗಿಗೆ ಒಂಬತ್ತು ವರ್ಷ ತುಂಬಿದಾಗ ಅವಳನ್ನು ತನ್ನ ಗಂಡನ ಮನೆಗೆ ಕರೆದೊಯ್ಯಬೇಕು ಎಂಬ ವಿಚಿತ್ರ ನಿಲುವನ್ನು ತೆಗೆದುಕೊಂಡಿತು. ಮದುವೆಯಾದ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದಾರೆ. ಹುಡುಗಿಯನ್ನು ಆಕೆಯ ತಂದೆ ಅವನಿಗೆ ಮಾರಿ ನಂತರ ಮದುವೆ ಮಾಡಿದ್ದಾರೆ.
ಘಟನೆಯಲ್ಲಿ ಹುಡುಗಿಯ ತಂದೆ ಮತ್ತು ವರನನ್ನು ಬಂಧಿಸಲಾಗಿದೆ. ಗ್ರಾಮೀಣ ಅಫ್ಘಾನಿಸ್ತಾನದಲ್ಲಿ, ವಾಲ್ವಾರ್ ಎಂಬ ವ್ಯವಸ್ಥೆಯನ್ನು ಆಚರಿಸಲಾಗುತ್ತದೆ, ಇದರಲ್ಲಿ ವರನ ಕುಟುಂಬವು ಹುಡುಗಿಯ ಸೌಂದರ್ಯ, ಆರೋಗ್ಯ ಅಥವಾ ಶಿಕ್ಷಣದ ಆಧಾರದ ಮೇಲೆ ವಧುವಿನ ಕುಟುಂಬಕ್ಕೆ ಹಣವನ್ನು ಪಾವತಿಸುತ್ತದೆ. ಆರು ವರ್ಷದ ಹುಡುಗಿಯ ತಂದೆ ಕೂಡ ಈ ರೀತಿಯ ಹಣವನ್ನು ಪಡೆದಿದ್ದಾರೆ.
2021 ರಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದ ಮೇಲಿನ ನಿರ್ಬಂಧಗಳು ಬಾಲ್ಯ ವಿವಾಹ ಮತ್ತು ಬಲವಂತದ ವಿವಾಹಗಳಿಗೆ ಉತ್ತೇಜನ ನೀಡಿವೆ. ದೇಶದಲ್ಲಿ ಮಹಿಳೆಯರ ಮೇಲಿನ ಇಂತಹ ನಿರ್ಬಂಧಗಳು ಬಾಲ್ಯ ವಿವಾಹಗಳಲ್ಲಿ ಶೇ. 25 ರಷ್ಟು ಹೆಚ್ಚಳ ಮತ್ತು ಹೆರಿಗೆಯಲ್ಲಿ ಶೇ. 45 ರಷ್ಟು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ವರದಿಯಾಗಿದೆ.