ನ್ಯೂಸ್

ತಮಿಳುನಾಡಿನಲ್ಲಿ ಫೆಂಗಲ್​ ಚಂಡಮಾರುತ ಅಬ್ಬರ! ಮೂವರು ಸಾವು, 100ಕ್ಕೂ ಅಧಿಕ ಮಂದಿ ರಕ್ಷಣೆ | Fengal Cyclone

Fengal Cyclone : ತಮಿಳುನಾಡಿನಲ್ಲಿ ಫೆಂಗಲ್​ ಚಂಡಮಾರುತದ ಅಬ್ಬರ ಶುರುವಾಗಿದ್ದು, ರಾಜಧಾನಿ ಚೆನ್ನೈನಲ್ಲಿ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಸಾವಿಗೀಡಾಗಿದ್ದಾರೆ.

ಫೆಂಗಲ್​ ಚಂಡಮಾರುತ ಶನಿವಾರ (ನ.30) ಸಂಜೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿತು. ಭಾರಿ ಮಳೆಯಿಂದಾಗಿ ಚೆನ್ನೈ ನಗರದ ಹಲವಾರು ಭಾಗಗಳು ಜಲಾವೃತಗೊಂಡಿವೆ. ಆದಾಗ್ಯೂ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹೆಚ್ಚಿನ ಮಟ್ಟದ ಹಾನಿಯ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳಾಗಿಲ್ಲ. ಆದರೆ, ಪುದುಚೇರಿಯಲ್ಲಿ ಪ್ರವಾಹಕ್ಕೆ ಒಳಗಾದ ಪ್ರದೇಶದಿಂದ 100ಕ್ಕೂ ಹೆಚ್ಚು ಜನರನ್ನು ಭಾರತೀಯ ಸೇನೆ ರಕ್ಷಿಸಿದೆ.

ಚಂಡಮಾರುತದಿಂದಾಗಿ ಸುಮಾರು 16 ಗಂಟೆಗಳ ಕಾಲ ಮುಚ್ಚಲ್ಪಟ್ಟಿದ್ದ ಚೆನ್ನೈ ವಿಮಾನ ನಿಲ್ದಾಣವು ಭಾನುವಾರ ಮುಂಜಾನೆ 4 ಗಂಟೆಗೆ ಮತ್ತೆ ತೆರೆಯಲ್ಪಟ್ಟಿತು. ಆದರೂ ಅನೇಕ ವಿಮಾನಗಳು ರದ್ದಾಗಿದ್ದು, ಇನ್ನು ಕೆಲ ವಿಮಾನಗಳು ವಿಳಂಬವಾಗಿವೆ. ಇನ್ನು ಶನಿವಾರದಿಂದ, ಚೆನ್ನೈ ಮತ್ತು ಅದರ ಹತ್ತಿರದ ಜಿಲ್ಲೆಗಳು ಹಾಗೂ ಪುದುಚೇರಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಚಂಡಮಾರುತ ಪರಿಣಾಮ ಅಲ್ಲಲ್ಲಿ ಭೂಕುಸಿತಗಳು ಸಹ ಸಂಭವಿಸಿವೆ. ಫೆಂಗಲ್​ ಚಂಡಮಾರುತ ಬಸ್, ರೈಲು ಮತ್ತು ವಿಮಾನ ಸೇವೆಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯ ಮೇಲೆ ಪರಿಣಾಮ ಬೀರಿದೆ.

ಸದ್ಯ ಫೆಂಗಲ್​ ಚಂಡಮಾರುತ ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲಿ ಸ್ಥಿರವಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಚಂಡಮಾರುತ ಬೇಗನೇ ದುರ್ಬಲಗೊಳ್ಳುವ ನಿರೀಕ್ಷೆಯಿದೆ. ಪುದುಚೇರಿ ಜಿಲ್ಲಾಧಿಕಾರಿಗಳು ಮುಂದಿನ ಆದೇಶದವರೆಗೆ ಎಲ್ಲ ಖಾಸಗಿ ಶಾಲೆಗಳು ಮತ್ತು ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳನ್ನು ಪರಿಹಾರ ಆಶ್ರಯ ತಾಣಗಳಾಗಿ ಘೋಷಿಸಿದ್ದಾರೆ.

ಚೆನ್ನೈ (ಮೀನಂಬಾಕ್ಕಂ ಮತ್ತು ನುಂಗಂಬಾಕ್ಕಂ ಹವಾಮಾನ ಕೇಂದ್ರಗಳು) 11.4 ಸೆಂ.ಮೀ ಮಳೆಯನ್ನು ಪಡೆದಿದ್ದರೆ, ಪುದುಚೇರಿಯು 46 ಸೆಂ.ಮೀ ಮಳೆಯನ್ನು ದಾಖಲಿಸಿದೆ. 2004ರ ಅಕ್ಟೋಬರ್ 31ರಂದು 21 ಸೆಂ.ಮೀ ಮಳೆ ಪಡೆದ ನಂತರ ಇದು ಪುದುಚೇರಿಯಲ್ಲಿ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೈಲಂನಲ್ಲಿ ಶನಿವಾರ ಬೆಳಿಗ್ಗೆ 8.30 ಮತ್ತು ಭಾನುವಾರ ಬೆಳಿಗ್ಗೆ 5.30 ರ ಅವಧಿಯಲ್ಲಿ 50 ಸೆಂ.ಮೀ ಮಳೆ ದಾಖಲಾಗಿದೆ.

ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ಎರಡು ರನ್‌ವೇಗಳು ಮತ್ತು ಟ್ಯಾಕ್ಸಿವೇ ಮುಳುಗಿದ್ದರಿಂದ ಶನಿವಾರ ಚೆನ್ನೈ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ವಿಡಿಯೋಗಳಲ್ಲಿ ಪ್ರವೇಶ ದ್ವಾರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸಿದೆ. 24 ದೇಶೀಯ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ ಮತ್ತು 26 ಅಂತಾರಾಷ್ಟ್ರೀಯ ವಿಮಾನಗಳು ಆಗಮನ ಮತ್ತು ನಿರ್ಗಮನ ವಿಳಂಬವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ಗಂಟೆಗಳಲ್ಲಿ ಪುದುಚೇರಿಯ ಪ್ರವಾಹ ಪ್ರದೇಶಗಳಲ್ಲಿ ಭಾರತೀಯ ಸೇನೆ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಪುದುಚೇರಿಯ ಕೃಷ್ಣನಗರದ ಕೆಲವು ಪ್ರದೇಶಗಳಲ್ಲಿ ಐದು ಅಡಿಗಳಷ್ಟು ನೀರು ನಿಂತಿದೆ. ಸುಮಾರು 500 ಮನೆಗಳಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸುವ ಕಾರ್ಯವನ್ನು ಸೇನಾ ತಂಡ ನಿರ್ವಹಿಸುತ್ತಿದೆ. ಈವರೆಗೆ 100ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಇನ್ನು ಫೆಂಗಲ್​ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಬೀರಿದೆ. ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ತುಂತುರು ಮಳೆಯಾದರೆ, ಈಗಲೂ ಮೋಡ ಕವಿದ ವಾತಾವರಣ ಇದೆ. ಮೈಸೂರು, ಚಾಮರಾಜನಗರ ಸೇರಿದಂತೆ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. (ಏಜೆನ್ಸೀಸ್​)