ಹೈದರಾಬಾದ್: ಸೈಬರಾಬಾದ್ ಪೊಲೀಸರು ಅನುಸರಿಸುತ್ತಿರುವ ಹೊಸ ನಡೆಯು ಇತರರಿಗೆ ಖಂಡಿತವಾಗಿ ಮಾದರಿಯಾಗಲಿದೆ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತೃತೀಯ ಲಿಂಗಿ ಸಮುದಾಯದ ಬೆನ್ನಿಗೆ ನಿಲ್ಲಲು ಮುಂದಾಗಿರುವ ಸೈಬರಾಬಾದ್ ಪೊಲೀಸರು ಅವರಿಗಾಗಿ ಪ್ರತ್ಯೇಕ ಕೊಠಡಿಯನ್ನು ತೆರೆದು ಸಮಸ್ಯೆಗಳನ್ನು ಬಗೆಹರಿಸುವ ಪೂರ್ವ ತಯಾರಿಯಲ್ಲಿದ್ದಾರೆ.
ತೃತೀಯ ಲಿಂಗಿ ಸಮುದಾಯದ ಸುಮಾರು 150 ಮಂದಿಯೊಂದಿಗೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಸಿ ಸಜ್ಜನರ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಚರ್ಚೆಯಲ್ಲಿ ಈ ವಿಶೇಷವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೈಬರಾಬಾದ್ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ ಅಳವಡಿಸಲು ತೀರ್ಮಾನಿಸಿರುವುದಾಗಿ ಆಯುಕ್ತರು ಘೋಷಿಸಿದರು.
ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯದ ಸಮಸ್ಯೆಗಳು ಮತ್ತು ಅವರ ಮೇಲಿನ ಕಾಳಜಿ ಬಗ್ಗೆ ಅರಿತುಕೊಳ್ಳುವುದು ಸೇರಿದಂತೆ ಅವರ ಸಮಸ್ಯೆಗೆ ಸಾಧ್ಯವಾಗುವ ಪರಿಹಾರಗಳನ್ನು ಹುಡುಕುವುದು ಈ ವಿಶೇಷ ಹೆಜ್ಜೆ ಮೂಲ ಉದ್ದೇಶವಾಗಿದೆ. ಸಾಮಾಜಿಕ ಕಾರ್ಯಕರ್ತೆ ಸುನಿತಾ ಕೃಷ್ಣನ್ ಮನವಿ ಮೇರೆಗೆ ಈ ವಿನೂತನ ಪ್ರಯತ್ನಕ್ಕೆ ಸೈಬರಬಾದ್ ಪೊಲೀಸರು ಕೈಹಾಕಿದ್ದಾರೆ.
ಇದೀಗ ಸೈಬರಬಾದ್ ಪೊಲೀಸರ ನಡೆಗೆ ರಾಜ್ಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಎಲ್ಲ ಪೊಲೀಸರು ಈ ವ್ಯವಸ್ಥೆಯನ್ನು ಅನುಸರಿಸಿದರೆ ತೃತೀಯ ಲಿಂಗಿಗಳ ಮೇಲಿನ ದೌರ್ಜನ್ಯ ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಲಿದೆ ಎಂಬುದು ಎಲ್ಲರ ಮಾತಾಗಿದೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ