ನ್ಯೂಸ್

ಪೊಲೀಸ್​ ಅಧಿಕಾರಿಗಳ ಸೋಗಿನಲ್ಲಿ ಬಿಲ್ಡರ್​ಗೆ 1 ಕೋಟಿ ರೂ. ವಂಚಿಸಿದ ಸೈಬರ್​ ಖದೀಮರು! | Cyber ​​Criminals

ಅಹಮದಾಬಾದ್​: ಪೊಲೀಸ್​ ಅಧಿಕಾರಿಗಳು ಎಂದು ಹೇಳಿಕೊಂಡ ಸೈಬರ್​ ಖದೀಮರು(Cyber ​​Criminals) ಇಲ್ಲಿನ ಬಿಲ್ಡರ್​ ಒಬ್ಬರಿಗೆ ಬರೊಬ್ಬರಿ 1 ಕೋಟಿ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಅಧಿಕಾರಿಗಳ ಸೋಗಿನಲ್ಲಿ ನನಗೆ 1 ಕೋಟಿ ರೂ ವಂಚಿಸಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಬಿಲ್ಡರ್ (ಹೆಸರು ಉಲ್ಲೇಖಿಸಿಲ್ಲ)​ ಅಹಮದಬಾದ್​ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕೇಸ್​ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಇದೇ ವರ್ಷ ಜು.3 ರಂದು ಖದೀಮರು ಬಿಲ್ಡರ್​ಗೆ ಕರೆ ಮಾಡಿದ್ದು, ''ಮುಂಬೈನ ಅಂದೇರಿ ಫೆಡ್​ಎಕ್ಸ್​ ಕೊರಿಯರ್​ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿ. ಈ ಪಾರ್ಸೆಲ್​ನಲ್ಲಿ 550 ಗ್ರಾಂ ಡ್ರಗ್ಸ್​ ಇದೆ. ಹೀಗಾಗಿ, ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿ ಕರೆ ಕಟ್​ ಮಾಡಿದ್ದಾನೆ. ಬಳಿಕ ಎನ್​ಸಿಬಿ ಅಧಿಕಾರಿಗಳು ಎಂದು ವಿಡಿಯೋ ಕಾಲ್​ ಮಾಡಿ, ಡ್ರಗ್ಸ್​ ಬಗ್ಗೆ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಬಳಿಕ ಸ್ಕೈಪ್​ ವಿಡಿಯೋ ಕಾಲ್​ ಮೂಲಕ ಕರೆ ಮಾಡಿ, ನಾನು ಪ್ರದೀಪ್​ ಸಾವಂತ್​ ಈ ಠಾಣೆಯ ಅಧಿಕಾರಿ ಎಂದು ವಿಡಿಯೋದಲ್ಲಿ ತೋರಿಸಿದ್ದಾನೆ.

ಈ ಕೇಸ್​ ಅನ್ನು ಇಡಿ, ಸಿಬಿಐಗೆ ವಹಿಸಲಾಗುವುದು ಎಂದು ಬೆದರಿಸಿದ್ದಾರೆ. ಅಲ್ಲದೇ, ಇತ್ತೀಚಿಗೆ ಬಿಲ್ಡರ್​ 50 ಕೋಟಿ ರೂ. ಭೂ ವ್ಯವಹಾರದ ಬಗ್ಗೆ ದಾಖಲೆ ಸಮೇತ ವಿವರಿಸಿದ್ದಾರೆ. ಬಳಿಕ ಕೊನೆಯ ಅವಕಾಶ ಕೊಡುವುದಾಗಿ ಹೇಳಿ, 1 ಕೋಟಿ ರೂ. ಕೊಟ್ಟರೆ ಪ್ರಕರಣವನ್ನು ಮುಚ್ಚಿ ಹಾಕಲಾಗುವುದು ಎಂದು ನಂಬಿಸಿ ಬ್ಯಾಂಕ್​ ಮೂಲಕ ಖದೀಮರು ತಮ್ಮ ಖಾತೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನೂ ಫೆಡ್​ಎಕ್ಸ್​ ಕೊರಿಯರ್​ ಕಂಪನಿಗೆ ತೆರಳಿದ ಬಿಲ್ಡರ್​ ಸಂಪೂರ್ಣ ಮಾಹಿತಿ ಕಲೆ ಹಾಕಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ,(ಏಜೆನ್ಸೀಸ್​).