ನ್ಯೂಸ್

ನಿಯಮ ಉಲ್ಲಂಘಿಸಿ ಚಿತ್ರೀಕರಣ; ಸಚಿವ ಜಮೀರ್ ಪುತ್ರನ Cult ಸಿನಿಮಾಗೆ ಶಾಕ್​ ನೀಡಿದ ಸರ್ಕಾರ

ಬೆಂಗಳೂರು: ಬನಾರಸ್​ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿದ್ದ ಸಚಿವ ಜಮೀರ್ ಅಹ್ಮದ್ ಪುತ್ರ​ ಝೈದ್ ಖಾನ್ ನಟನೆಯ ಎರಡನೇ ಸಿನಿಮಾಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಿದ್ದು, ಇದೀಗ ಕಲ್ಟ್ (Cult) ಸಿನಿಮಾ ತಂಡಕ್ಕೆ ಅರಣ್ಯ ಇಲಾಖೆ ಶಾಕ್‌ ನೀಡಿದ್ದು ಚಿತ್ರೀಕರಣ ಸ್ಥಗಿತಗೊಂಡಿದೆ.

ಹಂಪಿ ಸಂರಕ್ಷಣೆಗೆ ಪದೇಪದೆ ಧಕ್ಕೆಯಾಗುತ್ತಲೇ ಇದೆ. ಪುರಾತತ್ವ ಮಾತ್ರವಲ್ಲದೆ ತುಂಗಭದ್ರಾ ನದಿ ವ್ಯಾಪ್ತಿಯು ನೀರುನಾಯಿ ಸಂರಕ್ಷಿತ ಪ್ರದೇಶ ಹಾಗೂ ಕಾಯ್ದಿಟ್ಟ ಅರಣ್ಯ ಪ್ರದೇಶವೂ ಆಗಿದೆ. ಈ ನಡುವೆ ಬುಧವಾರ ಕಲ್ಟ್ (Cult) ಸಿನಿಮಾ ತಂಡವು ನಿಯಮ ಗಾಳಿಗೆ ತೂರಿ ಬೆಂಕಿಹಚ್ಚಿ ಚಿತ್ರೀಕರಣ ಮಾಡಿರುವ ಆರೋಪಕ್ಕೆ ಗುರಿಯಾಗಿದೆ.

ಬುಧವಾರದಿಂದ ನಾಲ್ಕು ದಿನಗಳ ಚಿತ್ರೀಕರಣ ನಡೆಸಲು ಬಂದಿರುವ ಕಲ್ಟ್​ (Cult) ಚಿತ್ರತಂಡವು ಹಂಪಿಯ ವಿವಿಧೆಡೆ ಶೂಟಿಂಗ್ ನಡೆಸಿತ್ತು. ತಾಲ್ಲೂಕಿನ ರಂಗಾಪುರ ಹಾಗೂ ಸಣಾಪುರದ ನದಿ ತೀರದಲ್ಲಿ ಸೆಟ್​ ನಿರ್ಮಿಸಿ ಹೆಣ ಸುಡುವ ಚಿತ್ರೀಕರಣ ಮಾಡಿದೆ. ಆದರೆ, ಈ ದೃಶ್ಯವನ್ನು ಚಿತ್ರೀಕರಿಸಿಲು ಚಿತ್ರತಂಡ ಅನುಮತಿ ಪಡೆದಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಶೂಟಿಂಗ್ ಸ್ಥಗಿತಗೊಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹವಾಮ ಆಯುಕ್ತ ವಿವೇಕಾನಂದ,ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಇದೆ. ಆದರೆ, ಬೆಂಕಿ ಹಾಕುವ ಸನ್ನಿವೇಶದ ಮಾಹಿತಿ ಗೊತ್ತಿಲ್ಲ. ಒಂದು ವೇಳೆ ನಿಯಮ ಮೀರಿ ಚಿತ್ರಿಕರಣ ನಡೆಸಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂದು ತಿಳಿಸಿದ್ದಾರೆ.

ಇದೇ ಮೊದಲಲ್ಲ 

ಸಚಿವ ಜಮೀರ್​ ಅಹ್ಮದ್ ಪುತ್ರ ನಟಿಸುತ್ತಿರುವ ಕಲ್ಟ್ ಸಿನಿಮಾ ತಂಡವು ವಿವಾದ ಮಾಡಿಕೊಂಡಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ದುಬಾರಿ ಬೆಲೆಯ ಡ್ರೋನ್​ಅನ್ನು ಝೈದ್​ಖಾನ್​ ಮುರಿದು, ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿ ದೊಡ್ಡ ವಿವಾದವೇ ಆಗಿತ್ತು. ಆ ಬಳಿಕ ಡ್ರೋನ್​ ಮಾಲೀಕನಿಗೆ ಪರಿಹಾರ ನೀಡಿ ಚಿತ್ರತಂಡ ವಿವಾದವನ್ನು ಸುಖಾಂತ್ಯಗೊಳಿಸಿತ್ತು. ಇದೀಗ ನಿಯಮಬಾಹಿರವಾಗಿ ಶೂಟಿಂಗ್ ಮಾಡಿರುವ ವಿಚಾರಕ್ಕೆ ಚಿತ್ರತಂಡ ಸದ್ದು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.