ನ್ಯೂಸ್

ನೀವು ಈ ಪಟ್ಟಿಯಲ್ಲಿರುವ ಔಷಧ ಬಳಸುತ್ತೀರಾ? ಹಾಗಾದರೆ ಎಚ್ಚರ!

ನವದೆಹಲಿ: ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಇದೀಗ 48 ಸಾಮಾನ್ಯವಾಗಿ ಬಳಸಲ್ಪಡುವ ಔಷಧಗಳನ್ನು ಅಪಾಯಕಾರಿ ಎಂದು ಗುರುತಿಸಿದೆ. ಮಾರ್ಚ್‌ನಲ್ಲಿ ಡ್ರಗ್ ರೆಗ್ಯುಲೇಟರ್ ನೀಡಿದ್ದ ಇತ್ತೀಚಿನ ಡ್ರಗ್ ಸುರಕ್ಷತಾ ಎಚ್ಚರಿಕೆಗಳನ್ನು ಅನುಸರಿಸುವಲ್ಲಿ ವಿಫಲವಾಗಿ ಔಷಧಗಳ ಗುಣಮಟ್ಟ ಇಳಿದಿರುವ ಕಾರಣ ಸಾಮಾನ್ಯವಾಗಿ ಬಳಸುವ 48 ಔಷಧಿಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿದೆ.

ಈ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಔಷಧ ನಿಯಂತ್ರಕ ಸಂಸ್ಥೆಯು ಒಟ್ಟು 1,497 ಮಾದರಿಗಳಲ್ಲಿ ಮಾರ್ಚ್‌ನಲ್ಲಿ ಸಂಶಯಾಸ್ಪದ ಗುಣಮಟ್ಟವನ್ನು ಹೊಂದಿರುವ ಔಷಧಗಳನ್ನು ಹೈಲೈಟ್ ಮಾಡಿದೆ. ಬಿಡುಗಡೆಯಾದ ಪಟ್ಟಿಯಲ್ಲಿ 1449 ಔಷಧಗಳು ಸುರಕ್ಷಿತವಾಗಿವೆ ಎಂದು ಗುರುತಿಸಲಾಗಿದೆ.

ಅಸುರಕ್ಷಿತ ಎಂದು ಗುರುತಿಸಲಾದ ಔಷಧಿಗಳಲ್ಲಿ ಮಧುಮೇಹ ವಿರೋಧಿ, ಆ್ಯಂಟಿಬಯೋಟಿಕ್ಸ್​, ಕ್ಯಾಲ್ಸಿಯಂ ಮತ್ತು ಹೃದ್ರೋಗ ಸಂಬಂಧಿ ಔಷಧಿಗಳು ಸೇರಿವೆ. ಈ ಪಟ್ಟಿಯು ಅಪಸ್ಮಾರಕ್ಕೆ ಬಳಸುವ ಔಷಧ ಗ್ಯಾಬಪೆಂಟಿನ್, ಅಧಿಕ ರಕ್ತದೊತ್ತಡಕ್ಕೆ ಬಳಸುವ ಔಷಧ ಟೆಲ್ಮಿಸಾರ್ಟನ್, ಮಧುಮೇಹ ವಿರೋಧಿ ಔಷಧ ಸಂಯೋಜನೆಯ ಗ್ಲಿಮೆಪಿರೈಡ್ ಮತ್ತು ಮೆಟ್‌ಫಾರ್ಮಿನ್ ಮತ್ತು ಎಚ್‌ಐವಿ ಡ್ರಗ್ ರಿಟೊನಾವಿರ್‌ನಂತಹ ಕೆಲವು ಜನಪ್ರಿಯ ಔಷಧಗಳನ್ನು ಸಹ ಒಳಗೊಂಡಿದೆ.

ಎಚ್ಚರಿಕೆಯ ಪಟ್ಟಿಯಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳು, ಪ್ರೋಬಯಾಟಿಕ್​ಗಳು ​​ಮತ್ತು ಹಲವಾರು ಮಲ್ಟಿವಿಟಮಿನ್ ಮಾತ್ರೆಗಳು ಸೇರಿವೆ. ಇದು ವಿಟಮಿನ್ ಸಿ, ವಿಟಮಿನ್ ಬಿ 12, ಫೋಲಿಕ್ ಆಮ್ಲ ಮತ್ತು ನಿಯಾಸಿನಾಮೈಡ್ ಚುಚ್ಚುಮದ್ದನ್ನು ಒಳಗೊಂಡಿದೆ.

ಇದಲ್ಲದೆ, ಪಟ್ಟಿಯು ಇತರ ಸಾಮಾನ್ಯ ಔಷಧಿಗಳಾದ ಅಮೋಕ್ಸಿಸಿಲಿನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ 3 ಮಾತ್ರೆಗಳು, ಟೆಲ್ಮಿಸಾರ್ಟನ್ ಮಾತ್ರೆಗಳು ಮತ್ತು ಅಲ್ಬೆಂಡಜೋಲ್ ಮಾತ್ರೆಗಳನ್ನು ಒಳಗೊಂಡಿದೆ. (ಏಜೆನ್ಸೀಸ್)

CDSO ಅಪಾಯಕಾರಿ ಎಂದಿರುವ ಎಲ್ಲಾ ಔಷಧಗಳ ಪಟ್ಟಿ ಕೆಳಗಿದೆ: