ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪುಸ್ತಕಗಳನ್ನು ಶಾಲೆಗೆ ಪೂರೈಕೆ ಮಾಡಲು ಆಟೋಗೆ ತುಂಬಿಸುತ್ತಿರುವುದು.  
ನ್ಯೂಸ್

ಸಿಆರ್​ಪಿ, ಮುಖ್ಯಶಿಕ್ಷಕರಿಗೆ ಭಾರವಾದ ಪುಸ್ತಕ

ಕಿರುವಾರ ಎಸ್​. ಸುದರ್ಶನ್​ ಕೋಲಾರ
ಶೈಕ್ಷಣಿಕ ವರ್ಷದ ತರಗತಿಗಳು ಇದೇ 29ರಿಂದ ಪ್ರಾರಂಭವಾಗಲಿದ್ದು, ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶಿಕ್ಷಣ ಇಲಾಖೆ ಈಗಾಗಲೇ ಕ್ರಮಕೈಗೊಂಡಿದೆ. ಆದರೆ ತಾಲೂಕು ಕೇಂದ್ರದಿಂದ

ಶಾಲೆಗಳಿಗೆ ಪುಸ್ತಕ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಕ್ಲಸ್ಟರ್​ಮಟ್ಟದ ಸಂಪನ್ಮೂಲ ವ್ಯಕ್ತಿ (ಸಿಆರ್​ಪಿ) ಹಾಗೂ ಶಾಲೆಗಳು ಮುಖ್ಯ ಶಿಕ್ಷಕರಿಗೆ ನೀಡಿದ್ದು, ಇದು ಶಿಕ್ಷಕರು, ಸಿಆರ್​ಪಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿ ವರ್ಷವು ತಾಲೂಕು ಕೇಂದ್ರದಿಂದ ಶಾಲೆಗೆ ಪುಸ್ತಕಗಳನ್ನು ಪೂರೈಕೆ ಮಾಡಲು ಸರ್ಕಾರದಿಂದ ಸರಬರಾಜು ವೆಚ್ಚ ಬಿಡುಗಡೆಯಾಗುತ್ತದೆ. ಕಳೆದ ವರ್ಷಗಳಲ್ಲಿ ಒಂದು ಕಿಮೀಗೆ 1.50 ರೂ. ಮಾತ್ರ ನೀಡಲಾಗುತ್ತಿತ್ತು, ಈ ಬಾರಿ ಅದನ್ನು ಪರಿಷ್ಕರಿಸಿ 2.50 ರೂ.ಗೆ ಏರಿಕೆ ಮಾಡಲಾಗಿದೆ. ಮಕ್ಕಳಿಗೆ ಸೌಲಭ್ಯಗಳ ವಿತರಣೆಯಲ್ಲಿ ಯಾವುದೇ ಕೊರತೆಯಾಗದಂತೆ, ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಬೇಕು ಹಾಗೂ ಸರ್ಕಾರದಿಂದ ಜಾರಿಗೆ ತರುವ ಯೋಜನೆಗಳ ಪ್ರಯೋಜನ ಮಕ್ಕಳಿಗೆ ತಲುಪಿಸುವಂತೆ ಸರ್ಕಾರವೂ ಇಲಾಖಾಧಿಕಾರಿಗಳಿಗೆ ಸೂಚಿಸಿದರೆ, ಇದರ ಹೊಣೆಗಾರಿಕೆಯನ್ನು ಅಧಿಕಾರಿಗಳು ಶಿಕ್ಷಕರ ಹೆಗಲಿಗೆ ಹಾಕಿರುವುದಕ್ಕೆ ಅಪಸ್ವರ ಕೇಳಿಬಂದಿದೆ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಂದ ಬೇಡಿಕೆ ಪಡೆದು ಇಲಾಖೆಯ (ಸ್ಟಾ$ಟ್ಸ್​) ತಂತ್ರಾಂಶದಲ್ಲಿ ದಾಖಲು ಮಾಡಬೇಕು. ಅದನ್ನು ಸಿಆರ್​ಪಿ, ಬಿಇಒ ಹಾಗೂ ಡಿಡಿಪಿಐ ಅವರು ಪರಿಶೀಲಿಸಿ ಇಲಾಖೆಗೆ ಕಳುಹಿಸಿಕೊಡುತ್ತಾರೆ. ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಹಿಂದಿನ ಆರ್ಥಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ.

ಪಠ್ಯಪುಸ್ತಕಗಳ ಮುದ್ರಣವನ್ನು ಪ್ರಾರಂಭಿಸುವ ಮುನ್ನ ಸರ್ಕಾರಿ ಶಾಲೆಗಳಲ್ಲಿ, ಅನುದಾನಿತ ಶಾಲೆಗಳಲ್ಲಿ ಹಾಗೂ ಅನುದಾನರಹಿತ ಶಾಲೆಗಳಲ್ಲಿ ತರಗತಿಗಳಲ್ಲಿ ಓದುತ್ತಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳ ಅಂಕಿ-ಅಂಶಗಳನ್ನು ಉಪನಿರ್ದೇಶಕರ ಮೂಲಕ ಪಡೆಯಲಾಗುತ್ತದೆ. ಇದರ ಪ್ರಕಾರ ಪಠ್ಯಪುಸ್ತಕ ಮುದ್ರಿಸಿ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿಸುವ ಕೆಲಸ ಕರ್ನಾಟಕ ಪಠ್ಯ ಪುಸ್ತಕ ಸಂ ಮಾಡುತ್ತದೆ.

ರಾಜ್ಯದಿಂದ ನೇರವಾಗಿ ಜಿಲ್ಲೆ ಹಾಗೂ ಜಿಲ್ಲೆಯಿಂದ ತಾಲೂಕು ಕೇಂದ್ರಗಳಿಗೆ ಪಠ್ಯ ಪುಸ್ತಕ ಕಳುಹಿಸಿಕೊಡಲಾಗುತ್ತದೆ. ತಾಲೂಕು ಕೇಂದ್ರಗಳಿಂದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಶೇ.100 ಹಣ ಪಾವತಿಸಿದ ನಂತರ ಖಾಸಗಿ ಶಾಲೆಗಳಿಗೆ ಪುಸ್ತಕ ವಿತರಿಸಲು ಕರ್ನಾಟಕ ಪಠ್ಯ ಪುಸ್ತಕ ಸಂದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

  • ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ಶಾಮೀಲು?
    ಶಿಕ್ಷಕರ ಹಿತಾಸಕ್ತಿ ಕಾಪಾಡಬೇಕಾಗಿರುವ ಶಿಕ್ಷಕರ ಸಂಟನೆಗಳು ಮೌನಕ್ಕೆ ಒಳಗಾಗಿವೆ. ಪದಾಧಿಕಾರಿಗಳು ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಶಿಕ್ಷಕರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದನ್ನೇ ಮರೆತಿದ್ದಾರೆ. ಕೆಲ ಪದಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಹಾಜರಾತಿಯಲ್ಲಿ ಸಹಿ ಹಾಕಲು ಸೀಮಿತರಾಗಿದ್ದಾರೆ. ಅವರು ಮಕ್ಕಳಿಗೆ ಪಾಠ ಪ್ರವಚನ ಮಾಡುವುದನ್ನು ಅಧಿಕಾರಿಗಳು ಕೇಳುವುದಿಲ್ಲ ಎಂದೇ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಲು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
  • ಕಳೆದ ವರ್ಷವೂ ಸಾಗಾಣಿಕೆ ವೆಚ್ಚ ಕೊಟ್ಟಿಲ್ಲ!
    ಕಳೆದ ವರ್ಷವೂ ಸಿಆರ್​ಪಿ, ಮುಖ್ಯ ಶಿಕ್ಷಕರ ಮೂಲಕವೇ ತಾಲೂಕು ಕೇಂದ್ರದಿಂದ ಶಾಲೆಗಳಿಗೆ ಪಠ್ಯಪುಸ್ತಕ ತೆಗೆದುಕೊಂಡು ಹೋಗಲು ಬಿಇಒ, ಇಸಿಒಗಳ ಮೂಲಕ ಸೂಚಿಸಿದ್ದರು. ಸಾಗಾಣಿಕೆ ವೆಚ್ಚವು ಸರ್ಕಾರದಿಂದ ಬಿಡುಗಡೆಯಾದ ಕೂಡಲೇ ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ ಕಳೆದ ವರ್ಷದ ಸಾಗಾಣಿಕೆ ವೆಚ್ಚವನ್ನೇ ಇನ್ನೂ ನೀಡಿಲ್ಲ. ಈ ವರ್ಷದ ವೆಚ್ಚದ ಹಣ ಸಾಧ್ಯವೇ ಎಂದು ಸಿಆರ್​ಪಿಯೊಬ್ಬರು ಪ್ರಶ್ನಿಸಿದ್ದಾರೆ. ಇಲಾಖೆಯಿಂದ ಕ್ಲಸ್ಟರ್​ಮಟ್ಟದಿಂದ ಶಾಲೆಗಳಿಗೆ ವಿತರಣೆ ಮಾಡಲು ಹೇಳಿದ್ದಾರೆ. ತಾಲೂಕು ಕೇಂದ್ರದಿಂದ ಕ್ಲಸ್ಟರ್​ಮಟ್ಟಕ್ಕೆ ತರಬೇಕಾದರೆ ಹಣ ವೆಚ್ಚವಾಗುತ್ತದೆ. ಕಡಿಮೆ ದರಕ್ಕೆ ಆಟೋ, ಟಾಟಾ ಎಸಿ ವಾಹನಗಳು ಬರುವುದಿಲ್ಲ, ಇದರ ಹೊರೆ ಮುಖ್ಯಶಿಕ್ಷಕರು ಹಾಗೂ ನಮ್ಮ ಮೇಲೆ ಬೀಳುತ್ತದೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.
  • ಶಿಕ್ಷಕಿಯರಿಗೆ ಸಮಸ್ಯೆ
    ನಾವು ಶಿಕ್ಷಕರಿಗೆ ತಿಳಿಸಿದಾಗ ಯಾರೂ ಅಸಕ್ತಿ ತೋರುವುದಿಲ್ಲ. ಬಹುತೇಕ ಶಾಲೆಗಳಲ್ಲಿ ಶಿಕ್ಷಕಿಯರು ಕೆಲಸ ಮಾಡುತ್ತಿರುವುದರಿಂದ ಅವರು ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ತಾಲೂಕು ಕೇಂದ್ರದಿಂದ ಶಾಲೆಗೆ ಹೋಗಬೇಕಾದರೆ ಬಹಳ ದೂರವಾಗುತ್ತದೆ. ಇದರ ಹೊರೆಯನ್ನು ಶಿಕ್ಷಕರು ಹಾಕಿಕೊಳ್ಳಲು ಸಿದ್ಧರಿರುವುದಿಲ್ಲ. ಮಹಿಳಾ ಶಿಕ್ಷಕರಿಗಂತೂ ಇದು ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪವಾಗಿದೆ.

ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಸರಬರಾಜು ಮಾಡಬೇಕು. ಈ ವಿಚಾರದಲ್ಲಿ ವಿಳಂಬ ಮಾಡಿದರೆ ಆಯಾ ಜಿಲ್ಲೆಯ ಡಿಡಿಪಿ, ಬಿಇಒ ಅವರನ್ನು ಹೊಣೆ ಮಾಡಲಾಗುತ್ತದೆ. ಶಾಲೆಗಳ ಪ್ರಾರಂಭದೊಳಗೆ ಪ್ರತಿ ಶಾಲೆಗೆ ಪುಸ್ತಕಗಳನ್ನು ತಲುಪಿಸಬೇಕು.- ಬಿ.ಬಿ.ಕಾವೇರಿ, ರಾಜ್ಯ ಆಯುಕ್ತರು, ಶಿಕ್ಷಣ ಇಲಾಖೆ