ನ್ಯೂಸ್

ಬಾಲ ರಾಮನ ದರ್ಶನಕ್ಕೆ ಮೊದಲ ದಿನವೇ ಜನಸಾಗರ: ನೂಕುನುಗ್ಗಲು ನಿಭಾಯಿಸಲು ಭದ್ರತಾ ಸಿಬ್ಬಂದಿ ಹರಸಾಹಸ

ಅಯೋಧ್ಯೆ: ನೂತನ ರಾಮ ಮಂದಿರದಲ್ಲಿ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡಿದ ಮರುದಿನವಾದ ಮಂಗಳವಾರ ದೇವಾಲಯವನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ. ಮೊದಲ ದಿನವೇ ಬಂದ ಭಕ್ತರ ದಂಡು ಹರಿದುಬಂದಿದೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ದಿನದ ಅಂತ್ಯದ ಹೊತ್ತಿಗೆ ಅಂದಾಜು 5 ಲಕ್ಷ ಜನರು ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ಅಯೋಧ್ಯೆ ಜಿಲ್ಲಾಧಿಕಾರಿ ಗೌರವ್ ದಯಾಳ್ ತಿಳಿಸಿದ್ದಾರೆ.

ಸರದಿ ಸಾಲುಗಳಲ್ಲಿ ನಿಂತು ಬಾಲರಾಮನ ದರ್ಶನಕ್ಕಾಗಿ ಹಾತೊರೆದ ದೃಶ್ಯ ಕಂಡುಬಂತು. ವಿಪರೀತ ಚಳಿಯನ್ನೂ ಲೆಕ್ಕಿಸದೆ ದೇವಸ್ಥಾನ ಪ್ರವೇಶಕ್ಕಾಗಿ ಮುಂಜಾನೆ ಮೂರು ಗಂಟೆ ಯಿಂದಲೇ ಸಾಲುಗಳಲ್ಲಿ ನಿಂತ ಜನರನ್ನು ನಿಯಂತ್ರಿಸುವುದು ಭದ್ರತಾ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತ್ತು. ಅಯೋಧ್ಯೆ ರಾಮಮಂದಿರದ ದ್ವಾರಗಳು ಸಾರ್ವಜನಿಕರ ಪ್ರವೇಶಕ್ಕಾಗಿ ಬೆಳಗ್ಗೆ 7 ಗಂಟೆಯಿಂದ 11.30ರ ವರೆಗೆ ತೆರೆದಿರುತ್ತವೆ. ನಂತರ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 7ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿರುತ್ತವೆ. ಆದರೆ, ಅಯೋಧ್ಯೆ ಮುಖ್ಯ ರಸ್ತೆಯಾದ ರಾಮ ಪಥ್ ಮಂಗಳವಾರ ಪ್ರವಾಹೋಪಾದಿಯಲ್ಲಿ ಬಂದ ಭಕ್ತ ಜನರಿಂದ ತುಂಬಿ ತುಳುಕುತ್ತಿತ್ತು. ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೂ ಕೆಲವು ದಿನಗಳ ಮುಂಚೆಯೇ ಭಕ್ತರು ಅಯೋಧ್ಯೆಗೆ ಆಗಮಿಸಿ ಬಿಡಾರ ಹೂಡಿದ್ದು ಮಂಗಳವಾರ ಸರದಿ ಸಾಲಲ್ಲಿ ನಿಂತು ದರ್ಶನ ಪಡೆದರು. ಬೆಳಗ್ಗೆ ಜನರು ಹಠಾತ್ತನೆ ಮುನ್ನುಗ್ಗಿದ್ದರಿಂದ ಸ್ವಲ್ಪ ಹೊತ್ತು ಗೊಂದಲಮಯ ವಾತಾವರಣ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂದಿರ ಸಂಕೀರ್ಣದಲ್ಲಿ 8,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಡಿಜಿಪಿ ಪ್ರಶಾಂತ್ ಕುಮಾರ್ ಮತ್ತು ರಾಜ್ಯ ಗೃಹ ಖಾತೆ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ದೇವಸ್ಥಾನದೊಳಗಿದ್ದು ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಆಭರಣ: ಆಧ್ಯಾತ್ಮ ರಾಮಾಯಣ, ವಾಲ್ಮೀಕಿ ರಾಮಾಯಣ, ರಾಮಚರಿತಮಾನಸ ಮತ್ತು ಅಳವಂಡಾರ್ ಸ್ತೋತ್ರಂ ಮೊದಲಾದ ಪಠ್ಯಗಳ ವ್ಯಾಪಕ ಸಂಶೋಧನೆ ಹಾಗೂ ಅಧ್ಯಯನದ ನಂತರ ಮೂರ್ತಿಯ ಆಭರಣಗಳನ್ನು ಸಿದ್ಧ ಪಡಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. 15 ಕೆಜಿ ಬಂಗಾರ, 18,000 ಪಚ್ಚೆ ಹರಳು ಮತ್ತು ವಜ್ರಗಳನ್ನು ಆಭರಣಗಳಿಗೆ ಬಳಸಲಾಗಿದೆ.

ಲಂಕಾದಲ್ಲೂ ಸಂಭ್ರಮ

ಹಿಂದುಗಳು ಹೆಚ್ಚಿರುವ ಶ್ರೀಲಂಕಾದ ಉತ್ತರ ಭಾಗದಲ್ಲಿ ಪ್ರಾಣ ಪ್ರತಿಷ್ಠಾಪನೆ ವೇಳೆ ಅನೇಕ ದೇವಸ್ಥಾನಗಳಲ್ಲಿ ಧಾರ್ವಿುಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.

ಬಾಲಕ ರಾಮ

ಸೋಮವಾರ ಪ್ರತಿಷ್ಠಾಪಿಸಲಾದ ಹೊಸ ರಾಮ ಲಲ್ಲಾ ಮೂರ್ತಿಯನ್ನು ಇನ್ನು ಮುಂದೆ ‘ಬಾಲಕ ರಾಮ’ ಎಂದು ಕರೆಯಲಾಗುತ್ತದೆ. ಮೂರ್ತಿಯು ನಿಂತ ಭಂಗಿಯಲ್ಲಿರುವ ಐದು ವರ್ಷದ ಬಾಲಕನನ್ನು ಪ್ರತಿನಿಧಿಸುವುದರಿಂದ ‘ಬಾಲಕ ರಾಮ’ ಎಂದು ಕರೆಯಲಾಗುವುದೆಂದು ಪ್ರಾಣ ಪ್ರತಿಷ್ಠೆ ವಿಧಿಯಲ್ಲಿ ಭಾಗವಹಿಸಿದ್ದ ಅರ್ಚಕರಲ್ಲಿ ಒಬ್ಬರಾದ ಅರುಣ್ ದೀಕ್ಷಿತ್ ಹೇಳಿದ್ದಾರೆ.

ರೈಲ್ವೆ ಹಳಿ ಮೇಲೆ ನಡೆದರು...

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕ್ಷೌರ ವೃತ್ತಿ ಮಾಡುತ್ತಿರುವ ಜಗದೀಶ್ ಮಂಜುಗುಣಿ ಮತ್ತು ನಾಗೇಶ್ ಮಹಾಲೆ ಜ.19ಕ್ಕೆ ಅಯೋಧ್ಯೆಗೆ ಬಂದಿದ್ದಾರೆ. ಜ.17ಕ್ಕೆ ಸುಲ್ತಾನ್​ಪುರ ರೈಲ್ವೆ ನಿಲ್ದಾಣ ತಲುಪಿದ್ದರು. ಅಯೋಧ್ಯೆಯಿಂದ 100 ಕಿಮೀ ದೂರಕ್ಕೆ ನಾಕಾಬಂದಿಯಿದ್ದ ಹಿನ್ನೆಲೆಯಲ್ಲಿ ಬಸ್ಸು, ಖಾಸಗಿ ವಾಹನ ಓಡಾಟಕ್ಕೆ ತಡೆಹಿಡಿಯಲಾಗಿತ್ತು. ಹೀಗಾಗಿ ಸುಲ್ತಾನ್ ಪುರದಿಂದ ರೈಲ್ವೆ ಟ್ರಾ್ಯಕ್ ಬದಿಯಿಂದ 40 ಕಿಮೀ ದೂರ ನಡೆದು ಅಯೋಧ್ಯೆ ತಲುಪಿದ್ದಾರೆ.

ಹುಬ್ಬಳ್ಳಿ ಹುಡುಗನ ಟೀ ಸ್ಟಾಲ್

ಅಯೋಧ್ಯೆಗೆ ಪ್ರವಾಸಿಗರು ಹೆಚ್ಚುತ್ತಿರುವುದರಿಂದ ಟೀ ಅಂಗಡಿ, ಸಣ್ಣಪುಟ್ಟ ಹೋಟೆಲ್​ಗಳಿಗೆ ಡಿಮ್ಯಾಂಡ್ ಬಂದಿದೆ. ಅಯೋಧ್ಯಾ ಧಾಮ್ ರೈಲ್ವೆ ನಿಲ್ದಾಣದ ಹೊರಭಾಗದಲ್ಲೇ ಹುಬ್ಬಳ್ಳಿಯ ರಾಹುಲ್ ಶಾ ಎಂಬ ಯುವಕ ಟೀ ಅಂಗಡಿ ಇಟ್ಟಿದ್ದಾರೆ. ಒಂದು ತಿಂಗಳ ಹಿಂದೆಯೇ ಅಯೋಧ್ಯೆಗೆ ಬಂದಿದ್ದಾನೆ. ಒಳ್ಳೆ ಸಂಪಾದನೆ ಆಗುತ್ತಿದೆ ಎಂದೂ ಹೇಳುತ್ತಾನೆ.