ನ್ಯೂಸ್

ದೇವಾಲಯಗಳಿಗೆ ಹರಿದುಬಂದ ಜನಸಾಗರ; ಅಯೋಧ್ಯೆ, ವಾರಣಾಸಿ, ಪುರಿ ಸಹಿತ ದೇಶದ ಪ್ರಮುಖ ದೇಗುಲಗಳು ಫುಲ್​

Webdesk - Manjunatha B

ನವದೆಹಲಿ: ಹೊಸ ವರ್ಷದ ಮೊದಲ ದಿನ ಅಯೋಧ್ಯೆ, ವಾರಾಣಸಿ, ಪುರಿಯ ಜಗನ್ನಾಥ ದೇವಾಲಯ ಸಹಿತ ದೇಶದ ಪ್ರಮುಖ ದೇಗುಲಗಳಿಗೆ ಭಕ್ತ ಸಾಗರವೇ ಹರಿದುಬಂದಿದೆ. ಅಯೋಧ್ಯೆಗೆ ಡಿ. 31ರಂದೇ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಬುಧವಾರ ಮೂರು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾ ದರ್ಶನ ಪಡೆದಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ. ವಾರಾಣಸಿ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದರು. ಸಂಜೆಯವರೆಗೂ ನೂಕು ನುಗ್ಗಲು ಮುಂದುವರಿದಿತ್ತು. ಸುಮಾರು 3.5 ಲಕ್ಷ ಭಕ್ತರು ದರ್ಶನ ಪಡೆದ್ದಾರೆ ಎಂದು ಅಂದಾಜಿಸಲಾಗಿದೆ. ಜನಸಂದಣಿಯನ್ನು ನಿಯಂತ್ರಿಸಲು ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಜಗನ್ನಾಥನ ಸನ್ನಿಧಿಗೆ ಲಕ್ಷಾಂತರ ಭಕ್ತರು: ಹೊಸ ವರ್ಷದ ಮೊದಲ ದಿನ ಪುರಿ ದೇವಾಲಯಕ್ಕೆ ಭೇಟಿ ನೀಡಿದ ಲಕ್ಷಾಂತರ ಭಕ್ತರು ಬಲಭದ್ರ, ದೇವಿ ಸುಭದ್ರ ಮತ್ತು ಜಗನ್ನಾಥ ದೇವರ ದರ್ಶನ ಪಡೆದರು. ದೇವಸ್ಥಾನದ ಸಿಂಹ ದ್ವಾರಕ್ಕೆ ಹೋಗುವ ರಸ್ತೆಯಲ್ಲಿ ಒಂದು ಕಿಲೋಮೀಟರ್​ಗೂ ಹೆಚ್ಚು ದೂರದ ಸಾಲು ಕಂಡುಬಂತು. ಬುಧವಾರ ಮಧ್ಯರಾತ್ರಿ 1.05 ಗಂಟೆ ವರೆಗೂ ದೇವಾಲಯದ ದ್ವಾರವನ್ನು ತೆರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದುಯೇತರರ ಅಂಗಡಿಗೆ ಅವಕಾಶವಿಲ್ಲ: ಮಹಾಕುಂಭ ಮೇಳದಲ್ಲಿ ಹಿಂದುಯೇತರ ಸಮುದಾಯದವರು ಅಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಅಖಿಲ ಭಾರತೀಯ ಅಖಂಡ ಪರಿಷತ್​ನ ಮುಖ್ಯಸ್ಥ ಮಹಾಂತ ರವೀಂದ್ರ ಪುರಿ ತಿಳಿಸಿದ್ದಾರೆ. ಮಹಾಕುಂಭ ಮೇಳದಲ್ಲಿ ಟೀ, ಜ್ಯೂಸ್ ಅಂಗಡಿಗಳು, ಹೂವಿನಂಗಡಿಗಳನ್ನು ತೆರೆಯಲು ಹಿಂದುಯೇತರರಿಗೆ ಅವಕಾಶ ನೀಡಬಾರದು. ಹಿಂದುಯೇತರರಿಗೆ ಅಂಗಡಿ ತೆರೆಯಲು ಅವಕಾಶ ನೀಡಿದರೆ ಅವರು ಉಗುಳುತ್ತಾರೆ ಮತ್ತು ಮೂತ್ರ ವಿಸರ್ಜಿಸುತ್ತಾರೆ. ಹೀಗಾದಲ್ಲಿ ನಾಗಾ ಸಾಧುಗಳು ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗಬಹುದೆಂದು ಅವರು ತಿಳಿಸಿದ್ದಾರೆ.

ದೇಗುಲದಲ್ಲಿ ಪುರುಷರು ಮೇಲುಡುಪು ತೆಗೆಯುವ ನಿಯಮಕ್ಕೆ ಕೇರಳ ಕೊಕ್: ಪುರುಷ ಭಕ್ತರು ದೇವಸ್ಥಾನವನ್ನು ಪ್ರವೇಶಿಸುವ ಮುನ್ನ ಅಂಗಿ, ಬನಿಯನ್ ಮುಂತಾದ ಮೇಲುಡುಪುಗಳನ್ನು ತೆಗೆಯಬೇಕೆಂಬ ಪದ್ಧತಿಯನ್ನು ತೆಗೆದು ಹಾಕಲು ದೇವಸ್ವಂ ಮಂಡಳಿ ನಿರ್ಧರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ತಿಳಿಸಿದ್ದಾರೆ. ಆದರೆ, ಯಾವ ದೇವಸ್ವಂ ಮಂಡಳಿ ಈ ಚಿಂತನೆ ನಡೆಸಿದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ಸಂತ ಹಾಗೂ ಸಮಾಜ ಸುಧಾರಕ ಶ್ರೀನಾರಾಯಣ ಗುರು ಸ್ಥಾಪಿಸಿದ ಪ್ರಖ್ಯಾತ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಮೇಲುಡುಗೆ ತೆಗೆಯುವುದು ಸಾಮಾಜಿಕ ಅನಿಷ್ಟವಾಗಿದ್ದು ಅದನ್ನು ತೆಗೆದು ಹಾಕಬೇಕೆಂದು ಮಂಗಳವಾರ ನಡೆದ ಶಿವಗಿರಿ ಯಾತ್ರಾ ಸಮ್ಮೇಳನದಲ್ಲಿ ಸ್ವಾಮಿ ಕರೆ ನೀಡಿದ್ದರು.