ಮುಂಬೈ: ತಮ್ಮ ಪ್ರೀತಿಯ ಪಾನಿಪುರಿ ಮಾರಾಟಗಾರ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಕ್ಕಾಗಿ ಆತನ ಗ್ರಾಹಕರು ಮರುಗುತ್ತಿದ್ದಾರೆ. ಕಡುಬಡವನಾಗಿದ್ದ ಆತನ ಕುಟುಂಬದವರ ನೆರವಿಗಾಗಿ ಮುಂದಾಗಿರುವ ದಕ್ಷಿಣ ಮುಂಬೈನ ಜನತೆ 5 ಲಕ್ಷ ರೂ. ದೇಣಿಗೆ ಸಂಗ್ರಹಿಸಿಕೊಡಲು ನಿರ್ಧರಿಸಿದ್ದಾರೆ.
ಮುಂಬೈನ ವಾಲ್ಕೇಶ್ವರದ ಮಾತಾ ಪಾರ್ವತಿ ನಗರದಲ್ಲಿ ನೆಲೆಸಿದ್ದ ಭಗವತಿ ಯಾದವ್ ಎಂಬ ಪಾನಿಪುರಿ ಮಾರಾಟಗಾರ 46 ವರ್ಷಗಳಿಂದ ಪ್ರತಿದಿನ ನೇಪಿಯನ್ ಸೀ ರೋಡ್ನ ರಂಗ್ಟಾ ಲೇನ್ನಲ್ಲಿ ಅಂಗಡಿ ಹಾಕುತ್ತಿದ್ದ. ತುಂಬಾ ರುಚಿಕಟ್ಟಾಗಿ ಪಾನಿಪುರಿ ಮಾಡಿಕೊಡುತ್ತಿದ್ದ. ಈತ ಬಿಸ್ಲೇರಿ ಮಿನರಲ್ ವಾಟರ್ ಬಳಸಿ ಪಾನಿ ಸಿದ್ಧಪಡಿಸುತ್ತಿದ್ದ. ಹಾಗಾಗಿ ಈತನಿಗೆ ಬಿಸ್ಲೇರಿ ಪಾನಿಪುರಿವಾಲಾ ಎಂಬ ಹೆಸರೂ ಇತ್ತು. ಹಾಗಾಗಿ ದಕ್ಷಿಣ ಮುಂಬೈನ ಜನ ಪ್ರತಿದಿನವೂ ಈತನಲ್ಲಿ ಬಂದು ಪಾನಿಪುರಿ ಸವಿಯುತ್ತಿದ್ದರು.
ಆದರೆ, ಇತ್ತೀಚೆಗೆ ಕೋವಿಡ್-19 ಸೋಂಕಿಗೆ ತುತ್ತಾದ ಈತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ. ಈತನ ಬಡ ಹಿನ್ನೆಲೆ ತಿಳಿದಿದ್ದ ದಕ್ಷಿಣ ಮುಂಬೈನ ಜನ ಸಾರ್ವಜನಿಕವಾಗಿ ದೇಣಿಗೆ ಸಂಗ್ರಹಿಸಿ ಈತನ ಕುಟುಂಬದವರಿಗೆ ನೆರವಾಗಲು ಮುಂದಾಗಿದ್ದಾರೆ. ಇದುವರೆಗೂ 2.5 ಲಕ್ಷ ರೂ. ಸಂಗ್ರಹವಾಗಿರುವುದಾಗಿ ಕ್ರೌಡ್ ಫಂಡಿಂಗ್ ಆರಂಭಿಸಿರುವ ಗಿರೀಶ್ ಅಗರ್ವಾಲ್ ತಿಳಿಸಿದ್ದಾರೆ.
ಪಾನಿಪುರವಾಲಾನ ಪುತ್ರಿ ಗಣಿತ ಶಿಕ್ಷಕಿಯಾಗಿದ್ದರೆ, ಆತನ ಪತ್ನಿ ಗೃಹಿಣಿಯಾಗಿದ್ದಾಳೆ. ಭಗವತಿ ಯಾದವ್ ಪಾನಿಪುರಿ ಮಾರಿ ತರುತ್ತಿದ್ದ ಹಣದಲ್ಲೇ ಇವರ ಕುಟುಂಬ ಸಾಗಬೇಕಿತ್ತು. ಇದೀಗ ಆತ ಇಲ್ಲವಾಗಿರುವ ಕಾರಣ ಈ ಕುಟುಂಬಕ್ಕೆ ಆರ್ಥಿಕ ಸಹಾಯದ ಅತ್ಯಗತ್ಯವಿದೆ. ಹಾಗಾಗಿ ತಾವು ಕ್ರೌಡ್ ಫಂಡಿಂಗ್ ಆರಂಭಿಸಿದ್ದಾಗಿ ತಿಳಿಸಿದ್ದಾರೆ.