ನ್ಯೂಸ್

ಉಪರಾಷ್ಟ್ರಪತಿ ಚುನಾವಣೆ ವೇಳೆ ಅಡ್ಡ ಮತದಾನ; ತನಿಖೆಗೆ ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಆಗ್ರಹ| Manish Tewari

Manish Tewari: ಉಪರಾಷ್ಟ್ರಪತಿ ಚುನಾವಣೆಯಲ್ಲಿ 15 ವಿಪಕ್ಷಗಳ ಸಂಸದರು ಅಡ್ಡ ಮತದಾನ ಮಾಡಿದ್ದು, ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಬಿಜೆಪಿ ಇದನ್ನು ವಿಪಕ್ಷಗಳ ಆಂತರಿಕ ಬಿರುಕು ಎಂದು ಕರೆದರೆ, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ ಎಂದು ಬುಧವಾರ(ಸೆ.10) ವರದಿಯಾಗಿದೆ.

ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಮನೀಶ್ ತಿವಾರಿ, ಅಡ್ಡ ಮತದಾನವು ನಂಬಿಕೆಯ ಗಂಭೀರ ಉಲ್ಲಂಘನೆಯಾಗಿದೆ. ಆಂತರಿಕ ಏಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಒಂದು ವೇಳೆ ಅಡ್ಡ ಮತದಾನ ನಡೆದಿದ್ದರೆ, ಅದನ್ನು ಭಾರತ ಒಕ್ಕೂಟದ ಪ್ರತಿಯೊಂದು ಘಟಕಗಳು ಗಂಭೀರವಾಗಿ ತನಿಖೆ ಮಾಡಬೇಕು. ಅಡ್ಡ ಮತದಾನವು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ.

ಅಡ್ಡ ಮತದಾನದ ಕುರಿತು ಮಾತನಾಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು,  ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್‌ಗೆ 'ಆತ್ಮಸಾಕ್ಷಿ'ಯೊಂದಿಗೆ ಮತ ಚಲಾಯಿಸಿದ ಇಂಡಿಯಾ ಅಲೈಯನ್ಸ್‌ನ ಕೆಲವು ಸಂಸದರಿಗೆ ವಿಶೇಷ ಧನ್ಯವಾದಗಳು ಎಂದು ಒತ್ತಿ ಹೇಳಿದ್ದರು.

ಉಪರಾಷ್ಟ್ರಪತಿ ಚುನಾವಣೆಗೆ ಪಕ್ಷದ ವಿಪ್‌ಗಳು ಅನ್ವಯಿಸುವುದಿಲ್ಲ. ಇದರಲ್ಲಿ ರಹಸ್ಯ ಮತದಾನವಿರುತ್ತದೆ. ಸಂಸದರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವ ನಿರೀಕ್ಷೆಯಿದೆ. ಆದರೆ ಪ್ರಾಯೋಗಿಕವಾಗಿ, ಹೆಚ್ಚಿನ ಸಂಸದರು ಪಕ್ಷದ ಮಾರ್ಗವನ್ನು ಅನುಸರಿಸುತ್ತಾರೆ. ಈವೆರಗೂ ಹೆಚ್ಚಿನ ವಿರೋಧ ಪಕ್ಷದ ನಾಯಕರು ತಮ್ಮ ಪಕ್ಷಗಳ ಸಂಸದರು ಯಾವುದೇ ಅಡ್ಡ ಮತದಾನ ಮಾಡಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ "ನಮ್ಮ ಕಡೆಯಿಂದ ಯಾವುದೇ ಅಡ್ಡ ಮತದಾನ ನಡೆದಿಲ್ಲ. ಆರ್‌ಜೆಡಿಯ 9 ಸಂಸದರು ಇಂಡಿಯಾ ಬಣಕ್ಕೆ ಮತ ಹಾಕಿದ್ದಾರೆ. ಈಗ ಅಲ್ಲಿ ಏನೇ ನಡೆದರೂ, ನಡೆಯದಿದ್ದರೂ, ನಾಯಕರು ಅದನ್ನು ಸಂಸತ್ತಿನಲ್ಲಿ ನೋಡುತ್ತಾರೆ" ಎಂದು ಹೇಳಿದ್ದಾರೆ.

ವಿರೋಧ ಪಕ್ಷದ 315 ಸಂಸದರು ಒಗ್ಗಟ್ಟಾಗಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದ್ದರೂ, ವಿರೋಧ ಪಕ್ಷದ ಅಭ್ಯರ್ಥಿ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎನ್. ಸುದರ್ಶನ್ ರೆಡ್ಡಿ ಕೇವಲ 300 ಮತಗಳನ್ನು ಪಡೆದರು. ಎನ್​ಡಿಎ ಕೂಟಕ್ಕೆ 427 ಮತ್ತು ವೈಎಸ್​ಆರ್​ಸಿಪಿಯ 11 ಸಂಸದರ ಬೆಂಬಲದಿಂದ 438 ಸಂಖ್ಯೆಯ ಬೆಂಬಲವನ್ನು ಊಹಿಸಲಾಗಿತ್ತು. ಆದರೆ ಮತದಾನದಲ್ಲಿ ಎನ್​ಡಿಎ ಅಭ್ಯರ್ಥಿ ರಾಧಕೃಷ್ಣನ್​ ಅವರಿಗೆ 452 ಮತಗಳು ಬಿದ್ದದ್ದವು. (ಏಜೆನ್ಸೀಸ್)