ನೀರಾವರಿ ನಿಗಮದ ಹಗರಣ ಕುರಿತ ವಿಶೇಷ ವರದಿ ನ.29ರಂದು ವಿಜಯವಾಣಿಯಲ್ಲಿ ಪ್ರಕಟವಾಗಿತ್ತು 
ನ್ಯೂಸ್

ನೀರಾವರಿ ನುಂಗಣ್ಣರಿಗೆ ಸಿಎಜಿ ಬಲೆ: ಕೋಟಿ ಕೋಟಿ ರೂ.ಅಕ್ರಮ, ಸಮಗ್ರ ಆಡಿಟ್​ಗೆ ಬೋಗಸ್ ಬಿಲ್ ಪ್ರಕರಣ

Webdesk - Ravikanth

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಟೆಂಡರ್ ಕರೆಯದೆ, ಕಾಮಗಾರಿಯನ್ನೇ ನಡೆಸದೆ ನೀರಾವರಿ ನಿಗಮದಲ್ಲಿ ಕೋಟಿ ಕೋಟಿ ರೂ.ಗಳನ್ನು ನುಂಗಿ ನೀರು ಕುಡಿದ ಸಾಕಷ್ಟು ಪ್ರಕರಣಗಳ ಬಗ್ಗೆ ಸಂಶಯ ಮೂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಆಡಿಟ್ ನಡೆಸಲು ನಿರ್ಧರಿಸಿದೆ. 2013ರಿಂದೀಚೆಗೆ ಸಾಕಷ್ಟು ನಕಲಿ ಬಿಲ್ ಸೃಷ್ಟಿಸಿ ಸರ್ಕಾರದ ಹಣ ಲೂಟಿ ಹೊಡೆದ ಪ್ರಕರಣದ ಬಗ್ಗೆ ಒಂದಷ್ಟು ನಿದರ್ಶನಗಳು ಸಿಕ್ಕಿದ್ದವು. ಇಂಥದ್ದೇ ಇನ್ನಷ್ಟು ಪ್ರಕರಣ ಇರುವ ಅನುಮಾನದ ಬಗ್ಗೆ ಚರ್ಚೆಗಳು ನಡೆದಿರುವ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆಸಕ್ತಿ ತೋರಿಸಿದೆ. ಗುತ್ತಿಗೆದಾರರ ಜತೆ ಶಾಮೀಲಾಗಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು 20ಕ್ಕೂ ಹೆಚ್ಚು ನಕಲಿ ಬಿಲ್ ಸೃಷ್ಟಿಸಿ 28 ಕೋಟಿ ರೂ. ವಂಚಿಸಿದ್ದು ಸರ್ಕಾರದ ಗಮನಕ್ಕೆ ಬಂದಿತ್ತು. ತಕ್ಷಣವೇ ತನಿಖೆ ನಡೆಸಿದ್ದ ಸರ್ಕಾರ ಅವ್ಯವಹಾರ ನಡೆದಿದ್ದನ್ನು ಖಾತ್ರಿ ಮಾಡಿಕೊಂಡಿತ್ತು.

ಆರಂಭದಲ್ಲಿ 8 ನಕಲಿ ಬಿಲ್ ಸೃಷ್ಟಿಸಿ 16 ಕೋಟಿ ರೂ. ವಂಚಿಸಿದ್ದ ಪ್ರಕರಣವನ್ನು ಇನ್ನಷ್ಟು ಕೆದಕಿದಾಗ 20ಕ್ಕೂ ಹೆಚ್ಚು ನಕಲಿ ಬಿಲ್ ಸೃಷ್ಟಿಸಿದ ಪ್ರಕರಣ ಬಯಲಾಗಿತ್ತು. ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ವರ್ಷವಾರು ಸಂಪ್ರದಾಯದಂತೆ ವಂಚಿಸಿರುವುದನ್ನು ಗಮನಿಸಿದ್ದ ಸಚಿವರು, ಹಿರಿಯ ಅಧಿಕಾರಿಗಳು ಹೌಹಾರಿದ್ದರು.

ಪತ್ರ ವ್ಯವಹಾರ: ವಂಚನೆ ಸಂಬಂಧ ಮಹಾಲೇಖಪಾಲರ (ಸಿ ಎಂಡ್ ಎಜಿ) ಮೂಲಕ ಆಡಿಟ್ ಮಾಡಿಸಲು ಜಲಸಂಪನ್ಮೂಲ ಇಲಾಖೆ ಸಚಿವರು ನಿರ್ಧರಿಸಿದ್ದಾರೆ. ಈ ಸಂಬಂಧ ಪತ್ರ ವ್ಯವಹಾರ ನಡೆಸಿದ್ದು, ಬೋಗಸ್ ಬಿಲ್ ಪ್ರಕರಣದಲ್ಲಿ ನೀರಾವರಿ ನಿಗಮಗಳ ವಿಶೇಷ ಆಡಿಟ್ ನಡೆಸಿಕೊಡುವಂತೆ ಕೋರಿದ್ದಾರೆ.

ಮಹಾಲೇಖಪಾಲರಿಗೆ ಆಡಿಟ್ ನಡೆಸುವಂತೆ ಕೋರಿದ್ದೇವೆ. ತನಿಖೆ ನಡೆಯಲಿ, ಯಾರ ಕಾಲದಲ್ಲಿ ಏನೆಲ್ಲ ಅಕ್ರಮ ಆಗಿದೆಯೋ ಹೊರಬರಲಿ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲಿ. | ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವ

ವಿಶೇಷ ಆಡಿಟ್ ಏಕೆ?: ಬೇರೆ ಯಾವುದೇ ತನಿಖಾ ತಂಡಗಳಿಗೆ ತನಿಖೆ ಕಷ್ಟವಾಗಬಹುದು, ಅತೀ ಸೂಕ್ಷ್ಮವಾಗಿ ತಳಮಟ್ಟದಲ್ಲಿ ತನಿಖೆ ನಡೆಯಬೇಕಿರುವುದರಿಂದ ಮತ್ತು ಹಣಕಾಸಿನ ವಿಷಯ ಪ್ರಮುಖವಾಗಿರುವುದರಿಂದ ಮಹಾಲೇಖಪಾಲರ ಮೂಲಕ ತನಿಖೆ ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ವಿಶೇಷ ಆಡಿಟ್ ವರದಿ ಸಿದ್ಧವಾದ ಬಳಿಕ ವಿಧಾನ ಸಭೆಯಲ್ಲಿ ಮಂಡನೆಯಾಗಿ, ಸಾರ್ವಜನಿಕ ಲೆಕ್ಕಪತ್ರ ಪರಿಶೀಲನೆ ಸಮಿತಿಯಿಂದಲೂ ಪರಾಮರ್ಶೆಯಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾದ ಹಣ ವಸೂಲಿ ಮಾಡಿಕೊಳ್ಳಲು ಮತ್ತು ಯಾವುದೇ ಹಂತದಲ್ಲಿ ಲೋಪ ಮುಚ್ಚಿಹಾಕದಂತೆ ತಡೆಯಲು ಈ ಮಾರ್ಗ ಸರಿಯಾದದ್ದೆಂದು ನಿರ್ಧಾರಕ್ಕೆ ಬರಲಾಗಿದೆ.

ಹೇಗೆ ನಡೆಯಲಿದೆ ತನಿಖೆ?: ನೀರಾವರಿ ನಿಗಮದಿಂದ ಟೆಂಡರ್ ಕರೆಯದೆ ಕಾಮಗಾರಿಗೆ ಹಣ ಪಾವತಿಯಾದ ಪ್ರಕರಣಗಳು, ಟೆಂಡರ್ ಕರೆದ ಬಳಿಕವೂ ಅನುಮಾನಾಸ್ಪದ ಷರತ್ತುಗಳು ಇರುವ ಪ್ರಕರಣ, ಹಣದ ಹೊಂದಾಣಿಕೆ ಬಗ್ಗೆ ಸೂಕ್ಷ್ಮ ಅವಲೋಕನ ನಡೆಯಲಿದೆ.

ಪ್ರಸ್ತುತ ಕರ್ನಾಟಕ ನೀರಾವರಿ ನಿಗಮದಿಂದ ನೇಮಕಗೊಂಡ ತನಿಖಾ ಸಮಿತಿಯು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಪ್ರಾಥಮಿಕ ವರದಿಯಲ್ಲಿ 16.61 ಕೋಟಿ ರೂ. ಅವ್ಯವಹಾರ ಗುರುತಿಸಲಾಗಿತ್ತು. ಮುಂದುವರಿದ ತನಿಖೆಯಲ್ಲಿ 11.73 ಕೋಟಿ ರೂ. ಹಣ ದುರುಪಯೋಗ ಪತ್ತೆ ಮಾಡಿತ್ತು. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವ ಅನಿವಾರ್ಯತೆ ಬಗ್ಗೆ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಯಾಗಿತ್ತು. ಕರ್ನಾಟಕ ನೀರಾವರಿ ನಿಗಮ ಹೊರತಾಗಿ ಇತರ ನಿಗಮಗಳಲ್ಲೂ ಇಂಥ ಅಕ್ರಮ ನಡೆದಿರುವ ಅನುಮಾನವಿದ್ದು, ಹೀಗಾಗಿ ಉನ್ನತ ಮಟ್ಟದ ತನಿಖೆ, ಪರಿಶೀಲನೆ ಆಗಬೇಕೆಂಬ ಬಗ್ಗೆ ವಿಚಾರ ವಿನಿಮಯ ನಡೆದಿತ್ತು.

ಎಲ್ಲೆಲ್ಲಿ ಅಕ್ರಮ?: ಕೇವಲ ಒಂದು ಕಚೇರಿ ಅಥವಾ ಒಂದು ಭಾಗದಲ್ಲಿ ಇಂತಹ ಅಕ್ರಮ ನಡೆದಿಲ್ಲ. ತನಿಖಾ ಸಮಿತಿಗೆ ಲಭ್ಯವಾದ ಮಾಹಿತಿ ಪ್ರಕಾರ ಅಥಣಿ, ಸಿರವಾರ, ಕಲಬುರಗಿ, ನರಗುಂದ, ರಾಮದುರ್ಗ, ಶಿವಮೊಗ್ಗ ಕಚೇರಿಗಳಲ್ಲಿ ಅಕ್ರಮವಾಗಿದೆ.

ಯಾವೆಲ್ಲ ವರ್ಷದ್ದು ತನಿಖೆಗೆ?: 2015-16ರಿಂದ 2020-21ರವರೆಗೂ ಅಧಿಕಾರಿಗಳು ನಿರಂತರವಾಗಿ ಲೂಟಿ ಹೊಡೆದಿರುವ ಸಂಗತಿ ನಿಗಮ ನೇಮಿಸಿದ ತನಿಖಾ ಸಮಿತಿ ವರದಿಯಲ್ಲಿ ದಾಖಲಾಗಿದೆ. ಆರಂಭದಲ್ಲಿ ಸರಾಸರಿ ವರ್ಷಕ್ಕೆ 1-2 ಕೋಟಿ ರೂ. ವಂಚನೆ ಇದ್ದಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ, 2020-21ರಲ್ಲಿ 9.5 ಕೋಟಿ ದಾಟಿತ್ತು. ಇದೆಲ್ಲ ಒಂದು ನಿಗಮದಲ್ಲಿ ಸಿಕ್ಕಿಬಿದ್ದ ಪ್ರಕರಣ ಮಾಹಿತಿ. ಇದರ ಹೊರತಾಗಿ ಇಂತಹ ಇನ್ನಷ್ಟು ಪ್ರಕರಣ ಇರುವ ಸಾಧ್ಯತೆಗಳು ದಟ್ಟವಾಗಿವೆ. ಅಂದ ಹಾಗೆ 2013-14ರಿಂದಲೂ ತನಿಖೆ ನಡೆಸುವ ಸಾಧ್ಯತೆ ಇದೆ.