ಬೆಂಗಳೂರು: ರಾಜಧಾನಿಯಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಹಸಿರು ವಲಯಗಳು ಸಹ ಕೆಂಪು ವಲಯಗಳಾಗಿ ಬದಲಾಗಿ ಕಂಟೇನ್ಮೆಂಟ್ಗೆ ಒಳಗಾಗುತ್ತಿವೆ!
ಲಾಕ್ಡೌನ್ 3.0 ಆರಂಭವಾದ ನಂತರ (18 ದಿನ) 8 ವಾರ್ಡ್ಗಳಲ್ಲಿ ಹೊಸದಾಗಿ ಸೋಂಕಿತರು ಪತ್ತೆಯಾಗಿದ್ದಾರೆ. ಕೆಲವರು ಸೋಂಕಿತರ ಸಂಪರ್ಕ ಹೊಂದಿದ್ದರೆ, ಇನ್ನು ಕೆಲವರು ಉಸಿರಾಟ ಹಾಗೂ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಉಸಿರಾಟ ಮತ್ತು ಅನಾರೋಗ್ಯದ ತೊಂದರೆಯುಳ್ಳವರಿಗೆ ಯಾವ ಮೂಲದಿಂದ ಸೋಂಕು ಹರಡಿದೆ ಎಂಬುದೇ ಪತ್ತೆ ಆಗುತ್ತಿಲ್ಲ. ಆದರೆ ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಮೇ 3ರ ನಂತರ ಕಚೇರಿಗಳಿಗೆ ಹೋಗಲು ಅವಕಾಶ, ಅಗತ್ಯ ಸಾಮಗ್ರಿಗಳ ಖರೀದಿ, ಕೃಷಿ ಸೇರಿ ಇತರೆ ಉತ್ಪನ್ನಗಳು, ಮದ್ಯ ಮಾರಾಟಕ್ಕೆ ಅವಕಾಶ ಹಾಗೂ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರಿಗೆ ಅನುಮತಿ ನೀಡಿದ್ದ ಕಾರಣ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.
53 ವಾರ್ಡ್ಗಳಲ್ಲಿ ಸೋಂಕು: ಪಾಲಿಕೆ ವ್ಯಾಪ್ತಿಯ ಒಟ್ಟು 198 ವಾರ್ಡ್ಗಳಲ್ಲಿ 53ರಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಅವುಗಳಲ್ಲಿ ಪ್ರಸ್ತುತ 20 ವಾರ್ಡ್ ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಆ ಪ್ರದೇಶಗಳನ್ನು ಕಂಟೇನ್ಮೆಂಟ್ ಮಾಡಲಾಗಿದೆ. ಉಳಿದಂತೆ, 145 ವಾರ್ಡ್ಗಳು ಸೋಂಕುಮುಕ್ತವಾಗಿ ಉಳಿದುಕೊಂಡಿವೆ. ಈಗ ಎಲ್ಲೆಡೆ ಲಾಕ್ಡೌನ್ 4.0 ಜಾರಿಯಾದ ನಂತರ ಸಾರ್ವಜನಿಕರ ಸಂಚಾರ ಹೆಚ್ಚಳವಾಗಿದ್ದು, ಈ ಹಸಿರು ವಲಯದ ಪ್ರದೇಶಗಳಿಗೂ ಸೋಂಕು ಹರಡುವ ಆತಂಕ ಸೃಷ್ಟಿಯಾಗಿದೆ.
18 ದಿನದಲ್ಲಿ ಶತಕ
ಅಮೆರಿಕದಿಂದ ಬೆಂಗಳೂರಿಗೆ ವಾಪಸಾಗಿದ್ದ ವ್ಯಕ್ತಿಯಲ್ಲಿ (ಮಾ.9) ಮೊದಲು ಸೋಂಕು ಕಂಡುಬಂದಿತ್ತು. ಆ ನಂತರ ಮೇ 3ರವರೆಗೆ (56 ದಿನ) ವಿದೇಶಗಳಿಂದ ಬಂದವರು, ತಬ್ಲಿಘಿ ಜಮಾತ್ ಧಾರ್ವಿುಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಹಾಗೂ ಪ್ರಾಥಮಿಕ ಸಂಪರ್ಕ ಸೇರಿ ಇತರೆ ಕಾರಣಗಳಿಂದ 150 ಜನರು ಸೋಂಕಿಗೆ ಒಳಗಾಗಿದ್ದರು. ಅದರೆ, ಮೇ 4ರಿಂದ ಮೇ 20ರವರೆಗೆ (18 ದಿನ) ಹೆಚ್ಚುವರಿ 100 ಜನರಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬುಧವಾರದ ಅಂತ್ಯಕ್ಕೆ 250ಕ್ಕೆ ಏರಿಕೆಯಾಗಿದೆ.
ಬೆಂಗಳೂರು: ಕರೊನಾ ಸೋಂಕಿತ ವ್ಯಕ್ತಿ ಮುಖ್ಯಮಂತ್ರಿಗಳ ಗೃಹ ಕಚೇರಿ ಮತ್ತು ಮನೆಯ ಬಳಿ ಓಡಾಡಿದ್ದಾನೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಗೃಹ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಅಧಿಕಾರಿಗಳ ಸಹಿತ 142 ಜನರಿಗೆ ಬುಧವಾರ ಕೋವಿಡ್ ಪರೀಕ್ಷೆ ಮಾಡಿಸಲಾಯಿತು. ಸಿಎಂ ಕಚೇರಿಯ ಮುಂದಿನ ರಸ್ತೆಯಲ್ಲಿ ಓಡಾಡಿದ್ದಾನೆ ಎಂಬ ಮಾಹಿತಿ ಸಿಎಂ ಕಚೇರಿಗೆ ಬಂದಿತ್ತು. ಸೋಂಕಿತ ವ್ಯಕ್ತಿ ಸಿಎಂ ಕಚೇರಿ ಮತ್ತು ಮನೆಯೊಳಗೆ ಬಂದಿಲ್ಲ. ಆದರೆ, ಅಲ್ಲಿ ರಸ್ತೆಯಲ್ಲಿ ನಡೆದುಹೋಗಿದ್ದ ಎಂದು ತಿಳಿದುಬಂದಿದೆ. ಮುಂಜಾಗ್ರತಾ ಕ್ರಮವಾಗಿ ಸಿಎಂ ಕಚೇರಿ ಸಿಬ್ಬಂದಿಗೆ ಪರೀಕ್ಷೆ ಮಾಡಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೂ ಒಮ್ಮೆ ಸಿಎಂ ಕಚೇರಿ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.