ಬೆಂಗಳೂರು: ಒಂಟಿಯಾಗಿದ್ದ ವೃದ್ಧೆಯೊಬ್ಬರ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು, ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದೆ.
ಕಮಲ (80) ಕೊಲೆಗೀಡಾದ ವೃದ್ಧೆ. ಈಕೆಯ ಪತಿ ಆರು ತಿಂಗಳ ಹಿಂದಷ್ಟೇ ಸಾವಿಗೀಡಾಗಿದ್ದರು. ಮೂವರು ಮಕ್ಕಳಿದ್ದರೂ ಅವರು ಪ್ರತ್ಯೇಕವಾಗಿ ನೆಲೆಸಿದ್ದಾರೆ. ಹೀಗಾಗಿ ಕಮಲ ಒಂಟಿಯಾಗಿ ವಾಸವಿದ್ದರು. ಈಕೆಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಕೊರಳಲ್ಲಿದ್ದ ಸರ, ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿಕೊಂಡು ಹೋಗಿದ್ದಾರೆ.
ಕೊಲೆ ಪ್ರಕರಣ ನಡೆದ ಸ್ಥಳಕ್ಕೆ ಮಹಾಲಕ್ಷ್ಮೀ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಆರಂಭಿಸಿದ್ದು, ವಿಚಾರಣೆ ಹಾಗೂ ಲಭ್ಯ ಸುಳಿವುಗಳನ್ನು ಆಧರಿಸಿ ಅಪರಾಧಿಗಳ ಪತ್ತೆಗೆ ಬಲೆ ಬೀಸಿದ್ದಾರೆ.