ಬೆಂಗಳೂರು: ನೀರಿನಲ್ಲಿ ಕರಗದ ಪಿಒಪಿ ವಿಗ್ರಹಗಳು ಜಲಮೂಲಗಳಿಗೆ ಅಪಾಯಕಾರಿಯಾಗಿದ್ದು, ಇಂತಹ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದು, ಅಗತ್ಯ ಬಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆಯೂ ಹೇಳಿದ್ದಾರೆ.
ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಮ್ಮ ಕಚೇರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಇಂತಹ ತಯಾರಕರಿಗೆ ಮಂಡಳಿ ನೋಟಿಸ್ ನೀಡಿದ್ದಾಗ್ಯೂ ಅವರು ಮತ್ತೆ ತಯಾರಿಕೆಯಲ್ಲಿ ತೊಡಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಸೂಚನೆ ನೀಡಿದರು.
ಪ್ರಕೃತಿ ಮತ್ತು ಪರಿಸರ ಉಳಿಸಬೇಕಾದ್ದು ನಮ್ಮೆಲ್ಲರ ಹೊಣೆಯಾಗಿದ್ದು, ಜಲಮೂಲಗಳಿಗೆ ಹಾನಿಯುಂಟು ಮಾಡುವ ಭಾರ ಲೋಹ ಮತ್ತು ರಾಸಾಯನಿಕ ಬಣ್ಣಲೇಪಿತ ಪಿಒಪಿ ವಿಗ್ರಹಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ವಿಸರ್ಜನೆಯನ್ನು ತಡೆಯಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2020ರ ಮೇ 12ರಂದು ಮಾರ್ಗಸೂಚಿ ಹೊರಡಿಸಿದ್ದು, ಅದಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ದಿನಾಂಕ 21.08.2023ರಂದು ಸುತ್ತೋಲೆ ಹೊರಡಿಸಿ ಪಿಒಪಿ ಮತ್ತು ಭಾರ ಲೋಹ ಮಿಶ್ರಿತ ರಾಸಾಯನಿಕ ಬಣ್ಣಲೇಪಿತ ವಿಗ್ರಹಗಳ ತಯಾರಿಕೆ, ಮಾರಾಟ, ಸಾಗಾಟ ಮತ್ತು ವಿಸರ್ಜನೆಯನ್ನು ನಿಷೇಧಿಸಿದೆ. ಈಗ ಇದರ ಕಟ್ಟುನಿಟ್ಟಿನ ಪಾಲನೆ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್ಫರ್’ ಅಸಾಧ್ಯ ಅನಿಸುತ್ತೆ!
ಜಲ ಕಾಯ್ದೆ, ವಾಯು ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಹೇಳಿದ ಈಶ್ವರ ಖಂಡ್ರೆ, ಮಂಡಳಿಯ ನೋಟಿಸ್ಗೂ ಹೆದರದೆ, ಬೀಗಮುದ್ರೆ ಹಾಕಿದ್ದರೂ, ಹಿಂಬಾಗಿಲಿನಿಂದ ಪಿಓಪಿ ಗಣೇಶ ತಯಾರಿಕೆ, ಸಾಗಣೆ, ದಾಸ್ತಾನು ಮತ್ತು ಮಾರಾಟದಲ್ಲಿ ತೊಡಗಿರುವ ತಯಾರಕರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸ್ಪಷ್ಟ ಸೂಚನೆ ನೀಡಿದರು.
ವಿಷಕಾರಿ: ಪಿಒಪಿ ಮತ್ತು ರಾಸಾಯನಿಕ ಬಣ್ಣಲೇಪಿತ ಗಣೇಶ ಮೂರ್ತಿಗಳನ್ನು ಕೆರೆ, ಕಟ್ಟೆ, ನದಿ, ತೊರೆ, ಬಾವಿಗಳಲ್ಲಿ ವಿಸರ್ಜನೆ ಮಾಡಿದರೆ, ನೀರಿನಲ್ಲಿ ಸೀಸ, ನಿಕ್ಕಲ್, ಕ್ರೋಮಿಯಂನಂತಹ ಭಾರಲೋಹಗಳು ಕರಗುತ್ತವೆ. ಜೊತೆಗೆ ಪಿಒಪಿ ಕರಗದೆ ಹಾಗೇ ಉಳಿದು ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಈ ನೀರು ಕುಡಿಯುವ ಜಾನುವಾರುಗಳು ಸಾವಿಗೀಡಾಗುತ್ತವೆ. ಜನರೂ ಕಾಯಿಲೆ ಬೀಳುತ್ತಾರೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸಮುದಾಯ ಆರೋಗ್ಯ ರಕ್ಷಣೆಗೆ ಪಿಒಪಿ ಗಣೇಶ ಮಾರಾಟ, ತಯಾರಿಕೆ, ವಿಸರ್ಜನೆ ನಿಷೇಧಿಸುವುದು ಅನಿವಾರ್ಯ ಎಂದು ಹೇಳಿದರು. ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯಾದ್ಯಂತ ಪಿಓಪಿ ಗಣೇಶ ಮಾರಾಟ ನಿರ್ಬಂಧಿಸುವಂತೆ ಆದೇಶ ನೀಡಿದರು.
ಇದನ್ನೂ ಓದಿ: ಹದಿನೇಳೇ ನಿಮಿಷಗಳಲ್ಲಿ ಮದುವೆ; ಇದರ ಉದ್ದೇಶವೇ ಉದಾತ್ತ!
ಜಲಚರಗಳ ಸಾವಿಗೆ ಕಾರಣವಾಗುವ, ಕೆರೆ, ಕಟ್ಟೆ, ಬಾವಿಯ ನೀರನ್ನು ಕಲುಷಿತಗೊಳಿಸುವ ಪಿಒಪಿ ಮತ್ತು ರಾಸಾಯನಿಕ ಬಣ್ಣಲೇಪಿತ ಗಣೇಶ ಮೂರ್ತಿಗಳನ್ನು ತ್ಯಜಿಸಿ, ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸುವಂತೆ ಹಾಗೂ ಇತರರನ್ನೂ ಪರಿಸರ ಸ್ನೇಹಿ ಗಣಪನ ಪೂಜಿಸುವಂತೆ ಪ್ರೇರೇಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಗಣಪತಿ ಪರಿಸರದಿಂದ ಉದ್ಭವಿಸಿದ ದೇವರು, ನಾವು ಪರಿಸರ ಸ್ನೇಹಿ ಗಣಪನ ಪೂಜಿಸಿದರೆ ಅದು ನಿಜ ಭಕ್ತಿಯ ಸಮರ್ಪಣೆ ಆಗುತ್ತದೆ ಎಂದು ತಿಳಿಸಿರುವ ಅವರು, ಜೇಡಿ ಮಣ್ಣಿನಿಂದ ಅಥವಾ ಗೋಮಯದಿಂದ ತಯಾರಿಸಿದ ಗಣಪತಿಯ ಮೂರ್ತಿಗಳನ್ನು ಪೂಜಿಸಿ, ಮನೆಯಲ್ಲೇ ವಿಸರ್ಜಿಸಿ ಆ ನೀರನ್ನು ಗಿಡ, ಮರಗಳಿಗೆ ಹಾಕುವ ಮೂಕ ಪ್ರಕೃತಿ ಪರಿಸರ ಉಳಿಸುವಂತೆ ಮನವಿ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ನಾವು ಪರಿಸರಕ್ಕೆ ಮಾರಕವಾದಂತಹ ಬಣ್ಣ ಲೇಪಿತ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ನಿಂದ ತಯಾರಿಸಿದ ಮೂರ್ತಿಗಳನ್ನು ಕೆರೆ, ಬಾವಿ, ನದಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ ವಿಸರ್ಜಿಸುದಿಲ್ಲ ಎಂದು ಪ್ರತಿಜ್ಞೆ ಮಾಡೋಣ. ನಮ್ಮ ಪರಿಸರವನ್ನು ಸಂರಕ್ಷಿಸೋಣ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡೋಣ ಎಂಬ ಸಂಕಲ್ಪ ಮಾಡೋಣ ಎಂದು ಮನವಿ ಮಾಡಿದರು.