ನ್ಯೂಸ್

ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್​​ ಅಳವಡಿಕೆ: 2ನೇ ಬೆಳೆಗೆ ನೀರಿಲ್ಲ: CM ಸಿದ್ದರಾಮಯ್ಯ

ತುಂಗಭದ್ರಾ ಅಣೆಕಟ್ಟಿನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದ್ದು, 8ಕ್ರೆಸ್ಟ್ ಗೇಟ್​ಗಳು ಅಳವಡಿಕೆಗೆ ಸಿದ್ಧವಿದೆ. ಕ್ರೆಸ್ಟ್ಗೇಟು ಬದಲಾವಣೆ ಸೇರಿದಂತೆ ಅಣೆಕಟ್ಟಿನ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಕಾರ್ಯ ತುಂಗಾಭದ್ರಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ತುಂಗಾ ಭದ್ರಾ ಅಣೆಕಟ್ಟಿನಲ್ಲಿ ಪ್ರಥಮ ಬೆಳೆಗೆ ಮಾತ್ರ ನೀರು ಲಭ್ಯವಿದ್ದು, ಎರಡನೇ ಬೆಳೆಗೆ ನೀರು ಹರಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ನೀರು ಹರಿಸುವ ಪೂರ್ವದಲ್ಲೇ ಎಲ್ಲಾ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ(CM) ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಪರಿಹಾರ ಕ್ರಮಗಳ ಕುರಿತು ಸಿಎಂ ಸಿದ್ದರಾಮಯ್ಯ ಸೋಮವಾರ(ಸೆ.8) ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದದಲ್ಲಿ ಮಾತನಾಡಿದರು.

ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಹಾನಿ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದ್ದು, 4,80,256 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 40,407 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ಒಟ್ಟು 5,20,663 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದರು.

5.55 ಕೋಟಿ ರೂ, ಪರಿಹಾರ

ಮಳೆಗೆ ಸಂಬಂಧಿಸಿದಂತೆ ಎಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 111ಮಂದಿ ಮೃತಪಟ್ಟಿದ್ದು, ಎಲ್ಲಾ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದ್ದು, ಒಟ್ಟು 5.55ಕೋಟಿ ಪರಿಹಾರ ನೀಡಲಾಗಿದೆ. 651ಮನೆಗಳು ಸಂಪೂರ್ಣ ಹಾನಿಯಾಗಿದ್ದು, 9087 ಮನೆಗಳು ಭಾಗಶಃ ಹಾನಿಯಾಗಿವೆ. ಸಂಪೂರ್ಣ ಹಾನಿಯಾದ 649 ಮನೆಗಳಿಗೆ ಹಾಗೂ ಭಾಗಶಃ ಹಾನಿಯಾದ 8608 ಮನೆಗಳಿಗೆ ಪರಿಹಾರ ಪಾವತಿಸಲಾಗಿದೆ. ಮನೆ ಹಾನಿಯಾದವರಿಗೆ ಪರಿಹಾರ ಹಾಗೂ ವಿವಿಧ ವಸತಿ ಯೋಜನೆಗಳಡಿ ಮನೆಯನ್ನು ಸಹ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಅಲ್ಲದೆ, ಈ ಅವಧಿಯಲ್ಲಿ ಒಟ್ಟು 766 ಜಾನುವಾರುಗಳು ಸಾವಿಗೀಡಾಗಿದ್ದು, ಒಟ್ಟು 1.52 ಕೋಟಿ ಪರಿಹಾರ ವಿತರಿಸಲಾಗಿದೆ ಎಂದರು.