

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕದ ಕೋಗಿಲು ಕ್ರಾಸ್ ಸೇರಿದಂತೆ ಪ್ರವಾಹ ಸಮಸ್ಯೆ ಎದುರಿಸುತ್ತಿರುವ ಸ್ಥಳಗಳಲ್ಲಿ ಕಾಲಮಿತಿಯೊಳಗೆ ಶಾಶ್ವತ ಪರಿಹಾರ ಕಾರ್ಯವನ್ನು ಕೈಗೊಳ್ಳುವುದಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪಿ.ಆಯುಕ್ತ ಸುನಿಲ್ ಕುಮಾರ್ ಭರವಸೆ ನಿಡಿದ್ದಾರೆ.
ಶನಿವಾರ ಸುರಿದ ಧಾರಾಕಾರ ಮಳೆಯಿಂದ ಏರ್ಪೋರ್ಟ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಮಳೆನೀರಿನಿಂದ ಸ್ಥಳೀಯರು ಸಮಸ್ಯೆ ಎದುರಿಸಿದ್ದರು. ಜತೆಗೆ ಕೋಗಿಲು ಕ್ರಾಸ್ನಲ್ಲಿ ವಾಹನ ಸಂಚಾರಕ್ಕೆ ಭಾರಿ ತೊಂದರೆ ಉಂಟಾಗಿತ್ತು. ಸಮಸ್ಯೆಯಾದ ಪ್ರದೇಶಗಳಿಗೆ ಭಾನುವಾರ ಇಂಜಿನಿಯರ್ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರ ಅಹವಾಲು ಆಲಿಸಿ ಮುಂದಿನ ದಿನಗಳಲ್ಲಿ ಜಲಾವೃತ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಅಭಯ ನೀಡಿದರು.
ಕೊಗಿಲು ವೃತ್ತದಲ್ಲಿ ಕೈಗೆತ್ತಿಕೊಂಡಿರುವ ಮಳೆನೀರುಗಾಲುವೆ ಕಾಮಗಾರಿ ಪರಿಶೀಲಿಸಿ, ನೀರು ನಿಂತುಕೊಳ್ಳುವ ಸಾಧ್ಯತೆಯಿರುವ ಸ್ಥಳಗಳನ್ನು ಗುರುತಿಸಿ ಸರಾಗವಾಗಿ ನೀರು ಹರಿದು ಹೋಗಲು ಕ್ರಮ ಕೈಗೊಳ್ಳಬೇಕು. ಕೂಡಲೆ ತಾತ್ಕಾಲಿಕ ಪರಿಹಾರ ನೀಡಿ ಶಾಶ್ವತ ಪರಿಹಾರಕ್ಕಾಗಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೊಡ್ಡಬಳ್ಳಾಪುರ ಹೆದ್ದಾರಿ ಬಳಿಯಿರುವ ಪುಟ್ಟೇನಹಳ್ಳಿ ಕೆರೆ ಸಮೀಪ ಪದೇ ಪದೆ ಜಲಾವೃತವಾಗಿ ಸಮಸ್ಯೆ ಉಂಟಾಗುತ್ತಿದೆ. ಮಳೆನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಕಾಲುವೆ ಸಂಪರ್ಕ ಕಲ್ಪಿಸಬೇಕು. ಇಂತಹ ಸಮಸ್ಯೆ ಇನ್ನಿತರ ಸ್ಥಳಗಳಲ್ಲಿ ಉದ್ಭವಿಸಿದ್ದಲ್ಲಿ ಅಲ್ಲಿ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಂಡು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಇದೇ ವೇಳೆ ಆಯುಕ್ತರು ಯಲಹಂಕ ಉಪನಗರದಲ್ಲಿ ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪೌರಾಕಾರ್ಮಿಕರ ಕಾರ್ಯನಿರ್ವಹಣೆಯನ್ನು ವೀಕ್ಷಿಸಿ ಕೆಲವೊಂದು ಸಲಹೆ-ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ಉತ್ತರ ಪಾಲಿಕೆಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.
ಬ್ಲಾಕ್ಸ್ಪಾಟ್ ತೆರವುಗೊಳಿಸಲು ಸೂಚನೆ:
ಅಪರ ಆಯುಕ್ತೆ ಆರ್.ಲತಾ ಅವರು ದಾಸರಹಳ್ಳಿ ವ್ಯಾಪ್ತಿಯ ಬಾಗಲಗುಂಟೆಯಲ್ಲಿ ಆಟೋ ಮತ್ತು ಪಿ.ಕೆ.ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಂ.ಎಸ್. ರಾಮಯ್ಯ ಲೇಔಟ್ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿರುವ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲು ಹಾಗೂ ಬ್ಲಾಕ್ ಸ್ಪಾಟ್ ತೆರವುಗೊಳಿಸಿ ಸುಂದರೀಕರಣಗೊಳಿಸಲು ಸೂಚಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳಿಂದ ಅಹವಾಲು ಸ್ವೀಕರಿಸಿದರು. ಜತೆಗೆ ಎಂಇಐ ಕಾಲೋನಿಯ ಮೈದಾನಕ್ಕೆ ಭೇಟಿ ನೀಡಿ ಅಲ್ಲಿ ಸ್ವಚ್ಚತಾ ಕಾರ್ಯ ನಡೆಸಲು ಹಾಗೂ ಬಂದ್ ಮಾಡಿರುವ ಸಾರ್ವಜನಿಕ ಶೌಚಾಲಯವನ್ನು ತೆಗೆಸಿ, ಸ್ವಚ್ಛಗೊಳಿಸಲು ಸೂಚಿಸಿದರು.