ನವದೆಹಲಿ: ಸ್ಮಶಾನದ ಗೋಡೆ ಕುಸಿದು ನಾಲ್ವರು ಮೃತಪಟ್ಟು, ಇಬ್ಬರೂ ಗಂಭೀರವಾಗ ಗಾಯಗೊಂಡಿರುವ ಘಟನೆ ನವದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
ಮೃತರನ್ನು ದೇವಿ ದಯಾಳ್ (70), ಮನೋಜ್ ಗಾಬಾ (54), ಕೃಷ್ಣ ಕುಮಾರ್ (52), ತಾನ್ಯಾ (11) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಟೀ ಅಂಗಡಿ ಮಾಲೀಕ ದಿಲೀಪ್ ಕುಮಾರ್ ಹಾಗೂ ಮಗುವೊಂದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸ್ಮಶಾನದ ಹಿಂಭಾಗ ಗೇಟ್ನ ಹಿಂಬದಿ ಗೋಡೆ ಬಳಿ ದಿಲೀಪ್ ಎಂಬುವವರು ಚಹಾ ಅಂಗಡಿ ಒಂದನ್ನು ನಡೆಸುತ್ತಿದ್ದರು. ಘಟನೆ ನಡೆದ ವೇಳೆ ದೇವಿ ದಯಾಳ್, ಮನೋಜ್ ಎಂಬುವವರು ಚಹಾ ಅಂಗಡಿ ಮುಂದೆ ಕುಳಿತಿದ್ದರು. ಇಬ್ಬರು ಮಕ್ಕಳು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗೋಡೆ ಕುಸಿದಿದ್ದು ಅವಶೇಷಗಳಡಿ ಸಿಲುಕಿ ನಾಲ್ವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇಬ್ಬರ ಸ್ಥಿತ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ಹೇಳುವ ಪ್ರಕಾರ ಸ್ಮಶಾನದ ಗೋಡೆಗಳ ಅಕ್ಕ-ಪಕ್ಕ ಗಿಡಗಳನ್ನು ನೆಡಲಾಗಿತ್ತು. ಇದರಿಂದಾಗಿ ಗೋಡೆ ಬಾಗಿದ್ದು, ಏಕಾಏಕಿ ಕುಸಿದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.