ನ್ಯೂಸ್

ಭಾರತದ 15ನೇ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್; ಇವರ ರಾಜಕೀಯ ಹಿನ್ನೆಲೆ ಬಗ್ಗೆ ಇಲ್ಲಿದೆ ಮಾಹಿತಿ | CP Radhakrishnan

CP Radhakrishnan: ಇಂದು(ಸೆ.9) ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಯ ಸಾಧಿಸಿದ್ದು, ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

300 ಮತಗಳಿಂದ ಇಂಡಿಯಾ ಮೈತ್ರಿಕೂಟದಿಂದ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಸೋಲು ಕಂಡರೆ, 452 ಮತಗಳಿಂದ ರಾಧಾಕೃಷ್ಣನ್ ಗೆಲುವು ಸಾಧಿಸಿದ್ದಾರೆ. ನೂತನ ಹಾಗೂ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್ ಅವರಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಶುಭಕೋರಿದ್ದಾರೆ.

‘ಮಹಾ’ ಗವರ್ನರ್

ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಸಿ.ಪಿ. ರಾಧಾಕೃಷ್ಣನ್ ಅವರನ್ನು ತಮ್ಮ ಆಯ್ಕೆಯಾಗಿ ಎನ್​ಡಿಎ ಘೋಷಿಸಿತು. ಈ ಹೆಸರೇ ಅಂತಿಮ ಎಂದು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅದ್ಯಕ್ಷ ಜೆಪಿ ನಡ್ಡಾ ತಿಳಿಸಿದ್ದರು. “ಮುಂದಿನ ಉಪರಾಷ್ಟ್ರಪತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ನಾವು ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದೇವೆ” ಎಂದು ನಡ್ಡಾ ಹೇಳಿದ್ದರು.

ರಾಜಕೀಯ ಹಿನ್ನೆಲೆ

ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್, ಅಕ್ಟೋಬರ್ 20, 1957ರಲ್ಲಿ ಜನಿಸಿದರು. ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಜುಲೈ 31, 2024ರಿಂದ ರಾಜ್ಯದ 24ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 2023ರಿಂದ ಜುಲೈ 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ, ಮಾರ್ಚ್ ನಿಂದ ಜುಲೈ 2024ರವರೆಗೆ ತೆಲಂಗಾಣ ರಾಜ್ಯಪಾಲರಾಗಿ (ಹೆಚ್ಚುವರಿ ಸ್ಥಾನಮಾನ) ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ (ಹೆಚ್ಚುವರಿ ಸ್ಥಾನಮಾನ) ಸೇವೆ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿ ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ,(ಏಜೆನ್ಸೀಸ್).