ನ್ಯೂಸ್

ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗೆ ಖರ್ಚಾಗೋದೆಷ್ಟು?

ನವದೆಹಲಿ: ಸದ್ಯ ಕೋವಿಡ್​ ಕಾಯಿಲೆಗೆ ಒಳಗಾದ ಎಲ್ಲ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಖಾಸಗಿ ಆಸ್ಪತ್ರೆಯ ವಾರ್ಡ್​ಗಳನ್ನು ಪಡೆದುಕೊಂಡು ಅಲ್ಲಿಯೂ ಉಚಿತವಾಗಿಯೇ ಆರೈಕೆ ಮಾಡಲಾಗುತ್ತಿದೆ. ಇದಲ್ಲದೇ, ಸೋಂಕಿಗೆ ತುತ್ತಾಗುವ ಹೆಚ್ಚು ಸಂಭಾವ್ಯವಿರುವ, ಲಘು ಸೋಂಕಿಗೆ ಒಳಗಾದವರಿಗೂ ಐಸೋಲೇಷನ್​ ವಾರ್ಡ್​ಗಳಲ್ಲಿಟ್ಟು ನೋಡಿಕೊಳ್ಳಲಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಇದೇ ವ್ಯವಸ್ಥೆ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕರೊನಾ ಸೋಂಕಿಗೆ ತುತ್ತಾದವರು ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ವೆಚ್ಚದಲ್ಲಿಯೇ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹಾಗಿದ್ದರೆ ಎಷ್ಟು ವೆಚ್ಚವಾಗಬಹುದು ಎಂಬುದಕ್ಕೆ ಇಲ್ಲಿದೆ ಅಂದಾಜು ಲೆಕ್ಕಾಚಾರ.

ಖಾಸಗಿ ಸಂಸ್ಥೆಯೊಂದು ದೆಹಲಿ, ಮುಂಬೈ ಹಾಗೂ ಕೋಲ್ಕತ್ತದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರು ಭರಿಸಿದ ವೆಚ್ಚವನ್ನು ಅಂದಾಜಿಸಿ ಕನಿಷ್ಠ 3 ಲಕ್ಷ ರೂ.ಗಳಿಂದ 17 ಲಕ್ಷ ರೂ.ವರೆಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಆರು ದಿನಗಳ ಚಿಕಿತ್ಸೆಗೆ 2.6 ಲಕ್ಷ ರೂ. ಖರ್ಚಾಗಿದ್ದರೆ, ಒಂದು ತಿಂಗಳು ಚಿಕಿತ್ಸೆ ಪಡೆದವರು 16.14 ಲಕ್ಷ ರೂ. ಪಾವತಿಸಿದ್ದಾರೆ.

ಕರೊನಾ ನಿಯಂತ್ರಣಕ್ಕೆ ಬಂದರೂ, ನಗರ ಪ್ರದೇಶ ಹಾಗೂ ಕಂಟೇನ್​ಮೆಂಟ್​ ಜೋನ್​ಗಳಲ್ಲಿರುವ ಜನರು ಅನಿವಾರ್ಯವಾಗಿ ಖಾಸಗಿ ಕಂಪನಿಗಳ ಮೊರೆ ಹೋಗುವುದು ಅನಿವಾರ್ಯವಾಗಲಿದೆ.

ಕಳೆದ ವಾರದವರೆಗಿನ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ, ಶೇ.15 ಕೋವಿಡ್​ ರೋಗಿಗಳಿಗಷ್ಟೇ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಕಂಡುಬಂದಿದೆ. ಇವರ ಪೈಕಿ ಶೇ.2.25 ಜನರಷ್ಟೇ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಹಂತಕ್ಕೆ ತಲುಪಿದ್ದಾರೆ. ಇವರಲ್ಲಿ ಬೆರಳೆಣಿಕೆಯಷ್ಟೇ ಜನರು ಸಾವಿರದಲ್ಲಿ ಒಂದಿಬ್ಬರಿಗೆ ವೆಂಟಿಲೇಟರ್​ ಬೇಕಾಗಬಹುದು ಎಂದು ಅಂಕಿ-ಸಂಖ್ಯೆಗಳು ಹೇಳುತ್ತವೆ.

ಒಟ್ಟಾರೆ ಚಿಕಿತ್ಸೆಯಲ್ಲಿ ಕೋವಿಡ್​ ಪರೀಕ್ಷೆಗೆ ವಿಧಿಸಲಾಗುವ 4,500 ರೂ. ಕಡಿಮೆ ಮೊತ್ತ ಎನ್ನಬಹುದು. ಉಳಿದಂತೆ, ಈ ಕಾಯಿಲೆಗೆ ಈವರೆಗೂ ಔಷಧವೇ ಇಲ್ಲದಿರುವುದರಿಂದ ವೈರಸ್​ ನಿಗ್ರಹಕ್ಕಾಗಿ ವಿವಿಧ ಔಷಧಗಳನ್ನು ನೀಡಲಾಗುತ್ತದೆ. 20 ವರ್ಷದ ವ್ಯಕ್ತಿಗೆ ಔಷಧಕ್ಕಾಗಿ ಪ್ರತಿದಿನ 1,300 ರೂ. ಖರ್ಚಾದರೆ, 60 ವರ್ಷದ ವ್ಯಕ್ತಿಗೆ ಪ್ರತಿದಿನದ ಔಷಧ ವೆಚ್ಚ 13,000 ರೂ.ವರೆಗೆ ತಲುಪಬಲ್ಲುದು.

ಇದನ್ನೂ ಓದಿ; ಕರೊನಾ ಸೋಂಕಿತರ ದೇಹದಲ್ಲೇ ಉತ್ಪತ್ತಿಯಾಗುತ್ತೆ ಪ್ರತಿರೋಧಕ ಶಕ್ತಿ, ಮತ್ತೊಮ್ಮೆ ಅಂಟಲ್ಲ ವೈರಸ್​

ತಜ್ಞ ವೈದ್ಯರ ಸಲಹಾ ವೆಚ್ಚವೇ ದಿನಕ್ಕೆ ದೆಹಲಿಯಲ್ಲಿ 3,800 ರೂ.ಗಳಿಂದ 7,700 ರೂ.ವರೆಗೆ ಇದ್ದರೆ ಮುಂಬೈ ಹಾಗೂ ಕೋಲ್ಕತ್ತದಲ್ಲಿ 2,000 ದಿಂದ 3,000 ರೂ.ವರೆಗಿದೆ. ತುರ್ತು ಚಿಕಿತ್ಸೆಯ ರೋಗಿಗಳಿಗೆ ಬಳಸಲಾಗುವ ಕೊಠಡಿಯ ಬಾಡಿಗೆಗೆ ಪ್ರತಿದಿನ 14,000 ದಿಂದ 32,000 ರೂ.ವರೆಗೆ ಪಡೆಯಲಾಗಿದೆ. ಸಾಮಾನ್ಯ ರೋಗಿಗಳ ಕೊಠಡಿಗೆ 3,200 ರೂ,ಗಳಿಂದ ಬಾಡಿಗೆ ಶುರುವಾಗುತ್ತದೆ.

ಈ ವಾರ್ಡ್​ಗಳಲ್ಲಿ ಬಳಸಲಾಗುವ ಸಾಮಗ್ರಿ ಹಾಗೂ ಪಿಪಿಇ ಕಿಟ್​ಗಳ ಮೊತ್ತವೇ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ದಿನಕ್ಕೆ ಮೂರರಿಂದ ಐದು ಪಿಪಿಇ ಕಿಟ್ ಬಳಸಲಾಗುತ್ತದೆ. ಇದಕ್ಕೆ 700 ರೂ.ಗಳಿಂದ 1,100 ರೂ. ಪಾವತಿಸಬೇಕು. ಒಂದು ತಿಂಗಳಿದ್ದರೆ ಇದಕ್ಕೆ 1.5 ಲಕ್ಷ ರೂ.ವರೆಗೆ ವೆಚ್ಚವಾಗಲಿದೆ. ಕೋವಿಡ್​ನ ವಿವಿಧ ಹಂತ ಪತ್ತೆ ಹಚ್ಚಲು ನಡೆಸಲಾಗುವ ಒಂದು ಪರೀಕ್ಷೆ 9,000 ರೂ. ಶುಲ್ಕ ವಿಧಿಸಲಾಗುತ್ತದೆ.

ಸಾಮಾನ್ಯ ವಾರ್ಡ್​ಗಳಲ್ಲಿ ವೈದ್ಯರ ಭೇಟಿಗೆ 2,100 ರಿಂದ 3,800 ರೂ.ಗಳಾದರೆ ಫಾರ್ಮಸಿ ವೆಚ್ಚ 300 ರಿಂದ 1000 ರೂ.ವರೆಗೆ ಇರುತ್ತದೆ. ಇದೇ ಮೊತ್ತ ಐಸಿಯು ವಾರ್ಡ್​ಗಳಲ್ಲಿ ಎರಡು ಪಟ್ಟು ಹೆಚ್ಚಾಗುತ್ತದೆ. ಇದಲ್ಲದೇ, ರಕ್ತದಲ್ಲಿ ಆಮ್ಲಜನಕ ಪ್ರಮಾಣ ಅಳೆಯುವ ಸಾಧನಕ್ಕೆ ಪ್ರತಿದಿನಕ್ಕೆ 1,000 ದಿಂದ 5,5000 ರೂ.ವರೆಗೆ ಪಾವತಿಸಬೇಕಾಗುತ್ತದೆ.

ಸಾಮಾನ್ಯ ವಾರ್ಡ್​ಗಳಲ್ಲಿ ಚಿಕಿತ್ಸೆ ನೀಡಬಹುದಾದರೂ, ವೈದ್ಯರು ಯಾವುದೇ ರಿಸ್ಕ್​ ತೆಗೆದುಕೊಳ್ಳಲು ಬಯಸದೇ ರೋಗಿಯನ್ನು ಐಸಿಯುಗೆ ಶಿಫ್ಟ್​ ಮಾಡುತ್ತಾರೆ. ಇದು ಸಹಜವಾಗಿಯೇ ಚಿಕಿತ್ಸಾ ವೆಚ್ಚವನ್ನು ಹೆಚ್ಚು ಮಾಡುತ್ತದೆ ಎಂದು ತಜ್ಞರ ಅಭಿಮತ.