ನ್ಯೂಸ್

ಕೋವಿಡ್ ಸಾವು 10 ಲಕ್ಷಕ್ಕೆ ಏರಿಕೆ? ಚೀನಾದಲ್ಲಿ ನಿಯಂತ್ರಣ ನಿಯಮ ಸಡಿಲಿಕೆ ಪರಿಣಾಮ

ಹಾಂಕಾಂಗ್: ಚೀನಾದಲ್ಲಿ ಶೂನ್ಯ-ಕೋವಿಡ್ ನಿಯಮಾವಳಿಗಳನ್ನು ತ್ವರಿತವಾಗಿ ಸಡಿಲಿಸುತ್ತಿರುವುದರಿಂದ ಸಾಂಕ್ರಾಮಿಕತೆಗೆ ಬಲಿಯಾಗುವವರ ಸಂಖ್ಯೆ 10 ಲಕ್ಷಕ್ಕೆ ಏರಿಕೆ ಆಗುವ ಸಾಧ್ಯತೆಯಿದೆ ಎಂದು ಹಾಂಕಾಂಗ್ ಸಂಶೋಧಕರ ಹೊಸ ಅಧ್ಯಯನವೊಂದು ಎಚ್ಚರಿಸಿದೆ. ದೇಶಾದ್ಯಂತ ಸೋಂಕಿನ ದರ ಸ್ಪೋಟಕ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ವೈರಸ್​ನ ಹೊಸ ಪ್ರಭೇದ ಸೃಷ್ಟಿಯಾಗುವ ಅಪಾಯವೂ ಇದೆ ಎಂದು ಸಂಶೋಧಕರು ಹೇಳಿದ್ದಾರೆ.

ಸಾಮೂಹಿಕ ವ್ಯಾಕ್ಸಿನೇಶನ್ ಬೂಸ್ಟರ್ ಆಂದೋಲನ ನಡೆಯದಿರುವುದರಿಂದ ಹಾಗೂ ಇತರ ಕಠಿಣ ನಿಯಮಗಳನ್ನೂ ಕೈಬಿಟ್ಟು ಆರ್ಥಿಕ ಚಟುವಟಿಕೆಗಳನ್ನು ಮುಕ್ತಗೊಳಿಸಿರುವುದರಿಂದ ರಾಷ್ಟ್ರ ವ್ಯಾಪಿಯಾಗಿ ಪ್ರತಿ ಹತ್ತು ಲಕ್ಷ ಜನರಲ್ಲಿ ಸುಮಾರು 684 ಮಂದಿ ಸಾಯಬಹುದು ಎಂದು ಸಂಶೋಧನಾ ವರದಿ ಅಂದಾಜು ಮಾಡಿದೆ. ಹಾಂಕಾಂಗ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಮಾಜಿ ಡೀನ್ ಗೇಬ್ರಿಯೆಲ್ ಲ್ಯುಂಗ್ ಇತರ ಇಬ್ಬರು ಸಹೋದ್ಯೋಗಿಗಳೊಂದಿಗೆ ಸಂಶೋಧನಾ ವರದಿಯನ್ನು ಸಿದ್ಧಪಡಿಸಿದ್ದಾರೆ. ಚೀನಾದ ಜನಸಂಖ್ಯೆ 141 ಕೋಟಿ ಆಗಿದ್ದು ಅದರ ಆಧಾರದಲ್ಲಿ ಹೇಳುವುದಾದರೆ 9,64,400 ಜನರು ಬಲಿಯಾಗುವ ಸಂಭವವಿದೆ ಎಂದು ಬ್ಲೂಮ್​ಗ್ ಲೆಕ್ಕ ಹಾಕಿದೆ. ಕಡ್ಡಾಯ ಪರೀಕ್ಷೆ ಮತ್ತು ಲಾಕ್​ಡೌನ್​ಗಳನ್ನು ಕೈಬಿಡುವ ಸಹಿತ ಹಲವು ನಿಯಂತ್ರಣ ಕ್ರಮಗಳನ್ನು ಸಡಿಲಿಸಿರುವ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ವಿವಿಧ ಸನ್ನಿವೇಶಗಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ

ವಿದೇಶಿಯರು ಹೊಣೆ

ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವುದರ ನಡುವೆ, ಝೀರೋ- ಕೋವಿಡ್ ವಿರೋಧಿ ಪ್ರತಿಭಟನೆಗಳಿಗೆ ‘ವಿದೇಶಿ ಶಕ್ತಿಗಳು’ ಕಾರಣ ಎಂದು ಚೀನಾದ ಅಧಿಕಾರಿಗಳು ಆರೋಪಿಸಿ ದ್ದಾರೆ. ನಿಯಮಗಳ ಸಡಿಲಿಕೆಯಾಗಿ ಸುಮಾರು ಎರಡು ವಾರವಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 2019ರ ಅಂತ್ಯದಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು.