ಚೆನ್ನೈ: ಕಳೆದ ವಾರ ಗುಣಮುಖರಾಗಿದ್ದ ಸುಮಾರು 10 ಮಂದಿಯಲ್ಲಿ ಮತ್ತೆ ಕರೊನಾ ವೈರಸ್ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ. ಈ ರೋಗಿಗಳು ನಗರದ ನಾಲ್ಕು ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸೋಂಕು ಪುನರಾವರ್ತಿತವಾಗಿರುವ ಬಗ್ಗೆ ಸಾಬೀತು ಪಡಿಸಲು ಈವರೆಗೆ ಯಾವುದೇ ದಾಖಲೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ, ವರದಿ ನೆಗೆಟಿವ್ ಬಂದ ಬಳಿಕವೂ ಕೆಲವರಲ್ಲಿ ರೋಗ ಲಕ್ಷಣ ಏಕೆ ಇರುತ್ತವೆ ಎಂಬ ಬಗ್ಗೆ ಸರ್ಕಾರ ದೊಡ್ಡ ಮಟ್ಟದ ಅಧ್ಯಯನ ನಡೆಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಮತ್ತೊಂದೆಡೆ ಚೆನ್ನೈನಲ್ಲಿ ಇಬ್ಬರು ವೈದ್ಯರು ರೋಗಲಕ್ಷಣಗಳಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ ಒಬ್ಬರಿಗೆ ಕರೊನಾ ಜತೆಗೆ ಡೆಂಗ್ಯೂ ಪರೀಕ್ಷೆಯೂ ಪಾಸಿಟಿವ್ ಬಂದಿದೆ. ಅವರು ಕರೊನಾದ ಎಲ್ಲ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಡೆಂಗ್ಯೂ ಪರೀಕ್ಷೆ ವರದಿ ತಪ್ಪಾಗಿ ತೋರಿಸಿದೆಯೇ ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ಲ್ಯಾಬ್ ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.
ಆಕ್ಸ್ಫರ್ಡ್ ಲಸಿಕೆ ಟ್ರಯಲ್ಗೆ ತಡೆ ಕರೊನಾ ವಿರುದ್ಧ ಅಭಿವೃದ್ಧಿ ಪಡಿಸಲಾಗಿರುವ ಎಝುಡ್ಡಿ 1222 ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರಲ್ಲಿ ಗಂಭೀರ ಅಡ್ಡಪರಿಣಾಮಗಳು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಿಶ್ವಾದ್ಯಂತ ನಡೆಯುತ್ತಿರುವ ತಮ್ಮ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಸ್ವಯಂಪ್ರೇರಿತವಾಗಿ ತಾತ್ಕಾಲಿಕ ತಡೆ ನೀಡಿದ್ದೇವೆ ಎಂದು ಲಸಿಕೆ ಅಭಿವೃದ್ಧಿ ಪಡಿಸಿರುವ ಆಸ್ಟ್ರಾಜೆನೆಕಾ ಕಂಪನಿ ಬುಧವಾರ ಹೇಳಿದೆ. ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಸ್ಟ್ರಾಜೆನೆಕಾ ಕಂಪನಿ ಈ ಲಸಿಕೆ ಅಭಿವೃದ್ಧಿಪಡಿಸಿದ್ದು, ಜಗತ್ತಿನಾದ್ಯಂತ ಭರವಸೆ ಮೂಡಿಸಿರುವ ಕೆಲವೇ ಲಸಿಕೆಗಳಲ್ಲಿ ಇದು ಪ್ರಮುಖವಾಗಿದೆ. ಈ ಬೆಳವಣಿಗೆಯಿಂದ ಆತಂಕಗೊಳ್ಳುವಂತದ್ದು ಏನೂ ಇಲ್ಲ. ಲಸಿಕೆ ಅಥವಾ ಔಷಧ ಅಭಿವೃದ್ಧಿಪಡಿಸುವ ಪ್ರಯೋಗಗಳ ಸಂದರ್ಭದಲ್ಲಿ ಈ ರೀತಿಯ ವಿಷಯಗಳು ನಡೆಯುತ್ತವೆ ಎಂದು ಆಸ್ಟ್ರಾಜೆನಿಕಾದ ವೈರಾಲಜಿಸ್ಟ್ ಶಾಹಿದ್ ಜಮೀಲ್ ಹೇಳಿದ್ದಾರೆ. ಆಸ್ಟ್ರಾಜೆನೆಕಾದ ಎಝುಡ್ಡಿ 1222 ಲಸಿಕೆಯನ್ನು ಅಮೆರಿಕದಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ಸುಮಾರು 50 ಸಾವಿರ ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದಾರೆ.
ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ನಿಲ್ಲಲ್ಲ ಭಾರತದಲ್ಲಿ ಆಸ್ಟ್ರಾಜೆನೆಕಾದ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿರುವ ಸೀರಮ್ ಇನ್ಸ್ಟಿಟ್ಯೂಟ್, ತಮ್ಮ ಪ್ರಯೋಗಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ನಮ್ಮಲ್ಲಿ ಪ್ರಯೋಗಗಳು ಯೋಜನೆಯಂತೆ ನಡೆಯುತ್ತಿದ್ದು, ಈವರೆಗೆ ನಾವು ಯಾವುದೇ ಸಮಸ್ಯೆಗಳನ್ನು ಎದುರಿಸಿಲ್ಲ ಎಂದು ತಿಳಿಸಿದೆ.
ಮೊಬೈಲ್, ಲ್ಯಾಂಡ್ಲೈನ್ ಬಳಕೆದಾರರ ಸಂಖ್ಯೆ ಕುಸಿತ ಕರೊನಾ ಬಿಕ್ಕಟ್ಟಿನಿಂದಾಗಿ ಮೊಬೈಲ್ ಹಾಗೂ ಲ್ಯಾಂಡ್ಲೈನ್ ಬಳಕೆದಾರರ ಸಂಖ್ಯೆ ಕಳೆದ ಮೇ ತಿಂಗಳಿನಲ್ಲಿ 56 ಲಕ್ಷ ಕುಸಿತ ಕಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಣೆ ಮತ್ತು ಸಂಶೋಧನಾ ಸಂಸ್ಥೆಯಾದ ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ. ಕರೊನಾದಿಂದಾಗಿ ವಲಸೆ ಕಾರ್ವಿುಕ ವರ್ಗ ಉದ್ಯೋಗ ಕಳೆದುಕೊಂಡಿದೆ. ಅವರು ಮೊಬೈಲ್ ಬಳಕೆ ಕಡಿಮೆ ಮಾಡಿದ್ದಾರೆ. ಉದ್ಯೋಗವಿಲ್ಲದ ಜನರು ತಮ್ಮ ಖರ್ಚುಗಳನ್ನು ತಗ್ಗಿಸಲು ಈ ರೀತಿಯ ಸೌಲಭ್ಯಗಳನ್ನು ಕೈಬಿಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
* ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಹೊಸದಾಗಿ 47 ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 100ಕ್ಕೂ ಅಧಿಕವಾಗಿವೆ.