ನ್ಯೂಸ್

ಪಾಕಿಸ್ತಾನದ ಖಜಾನೆ ತುಂಬುತ್ತಿದೆ ವಿದೇಶಿ ನೆರವು - ಐಎಂಎಫ್​ನಿಂದಲೂ ಸಿಗ್ತಿದೆ 1.4 ಶತಕೋಟಿ ಡಾಲರ್​

ವಾಷಿಂಗ್ಟನ್​: ಕರೊನಾ ಸೋಂಕು ತಡೆಗಾಗಿ ಪಾಕಿಸ್ತಾನಕ್ಕೆ 94 ಲಕ್ಷ ಡಾಲರ್ ನೆರವನ್ನು ಅಮೆರಿಕ ಘೋಷಿಸಿದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಗುರುವಾರ ಅಂದಾಜು 1.4 ಶತಕೋಟಿ ಡಾಲರ್ ನೆರವಿಗೆ ಒಪ್ಪಿಗೆ ನೀಡಿದೆ. ಕೋವಿಡ್​ 19ರ ಕಾರಣದಿಂದಾಗಿ ಬಾಕಿ ಪಾವತಿಸಲು ಅಡಚಣೆ ಎದುರಿಸುತ್ತಿದ್ದ ಪಾಕಿಸ್ತಾನಕ್ಕೆ ತುರ್ತು ಹಣಕಾಸಿನ ನೆರವು ಎಂದು ಇದನ್ನು ಐಎಂಎಫ್​ ಪರಿಗಣಿಸಿದೆ.

ನಿಖರವಾಗಿ ಹೇಳಬೇಕು ಎಂದರೆ 1.386 ಶತಕೋಟಿ ಡಾಲರ್ ( ಅಂದಾಜು 10,615 ಕೋಟಿ ರೂಪಾಯಿ) ಹಣದ ನೆರವು ಇದಾಗಿದೆ. ಬ್ಯಾಲೆನ್ಸ್ ಪೇಮೆಂಟ್ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಐಎಂಎಫ್​ ಬಳಿ ತುರ್ತು ಹಣಕಾಸಿನ ನೆರವು ಯಾಚಿಸಿತ್ತು. ಕಳೆದ ವರ್ಷ ಜುಲೈನಲ್ಲಿ ಪಾಕಿಸ್ತಾನ ದಿವಾಳಿಯಾಗುವುದನ್ನು ತಪ್ಪಿಸಲು ಬೇಲ್​ ಔಟ್​ ಘೋಷಿಸಿ ಐಎಂಎಫ್​ ಜತೆಗೆ ಒಪ್ಪಂದ ಮಾಡಿತ್ತು. ಇದರಂತೆ ಪಾಕಿಸ್ತಾನ ಐಎಂಎಫ್​ನಿಂದ 6ಶತಕೋಟಿ ಡಾಲರ್ ಬೇಲ್​ ಔಟ್ ಪ್ಯಾಕೇಜ್​ ಸಿಗುವುದಿತ್ತು. ಇದಕ್ಕೆ ಹೊರತಾಗಿ ಈ 138.6 ಕೋಟಿ ರೂಪಾಯಿ ನೆರವು ಈಗ ಪಾಕಿಸ್ತಾನಕ್ಕೆ ಸಿಕ್ಕಿದೆ.

ಕೋವಿಡ್ 19 ಸೋಂಕು ಪಾಕಿಸ್ತಾನದ ಅರ್ಥ ವ್ಯವಸ್ಥೆ ಮೇಲೆ ವಿಪರೀತ ಪರಿಣಾಮ ಬೀರುತ್ತಿದ್ದು, ಈ ನೆರವು ಅದಕ್ಕೆ ಅಗತ್ಯವಾಗಿದೆ. ಪಾಕ್​ನ ಆರ್ಥಿಕತೆ ಉತ್ತೇಜನ ನೀಡುವುದು ಕೂಡ ಅವಶ್ಯ. ಅದರ ಈಗಿರುವ ಬಾಕಿ ಪಾವತಿಸುವುದಕ್ಕೆ ದಾನಿ ರಾಷ್ಟ್ರಗಳ ನೆರವೂ ಬೇಕಾಗಬಹುದು ಎಂದು ಐಎಂಎಫ್​ನ ಫಸ್ಟ್​ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಆ್ಯಕ್ಟಿಂಗ್ ಚೇರ್​ಪರ್ಸನ್​ ಜ್ಯೋಫ್ರೇ ಒಕಮೊಟೊ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)