ನ್ಯೂಸ್

ನಮ್ಮ ದಾರಿಯಲ್ಲಿ ನಾವೆಂದೂ ಎದುರಿಸದ ಹಲವು ಸವಾಲುಗಳನ್ನು ಕರೊನಾ ನೀಡಿದೆ: ಪ್ರಧಾನಿ ಮೋದಿ

ನವದೆಹಲಿ: ನಾವು ಸ್ವಾವಲಂಬಿ ಆಗಬೇಕೆಂಬುದನ್ನು ಕರೊನಾ ವೈರಸ್​ ಪಿಡುಗು ಕಲಿಸಿಕೊಟ್ಟಿದೆ. ಭಾರತವು ಸಹ ಸ್ವಾವಲಂಬಿಯಾಗಲು ಗ್ರಾಮ ಪಂಚಾಯಿತಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

ಪಂಚಾಯತ್​ ರಾಜ್​ ದಿವಸ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ಗ್ರಾಮ ಪಂಚಾಯಿತಿ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ಸಂವಾದ ನಡೆಸಿದರು.

ಇದೇ ವೇಳೆ ಗ್ರಾಮಗಳ ಆರ್ಥಿಕತೆಗೆ ಉತ್ತೇಜನ ನೀಡಲು ಇ-ಗ್ರಾಮ್(E-Gram)​ ಆ್ಯಪ್​ ಮತ್ತು ಸ್ವಮಿತ್ವ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನಿ, ಸಶಕ್ತ ಪಂಚಾಯಿತಿಗಳು, ಆರ್ಥಿಕತೆಯನ್ನು ಹಾಗೂ ರಾಷ್ಟ್ರವನ್ನು ಬಲಗೊಳಿಸುತ್ತವೆ ಎಂದರು.

ಪಂಚಾಯತ್​ ರಾಜ್​ ಪ್ರಶಸ್ತಿ ಪಡೆದವರಿಗೆ ಶುಭಕೋರಿದ ಪ್ರಧಾನಿ ಇಂತಹ ಸಂದರ್ಭದಲ್ಲಿ ನಮ್ಮನ್ನು ತಂತ್ರಜ್ಞಾನ ಒಟ್ಟುಗೂಡಿಸಿದೆ. ತಂತ್ರಜ್ಞಾನದಿಂದಲೇ ನಾವಿಂದ ಭೇಟಿಯಾಗಲು ಸಾಧ್ಯವಾಯಿತು. ನಾವು ಜೀವಿಸುತ್ತಿದ್ದ ರೀತಿ ಹಾಗೂ ಕೆಲಸದ ಮೇಲೆ ಇಂದು ಕರೊನಾ ಹೆಚ್ಚು ಪ್ರಭಾವ ಬೀರಿದೆ. ಇದೀಗ ನಮ್ಮ ದಾರಿಯಲ್ಲಿ ನಾವೆಂದು ಎದುರಿಸದ ಹಲವು ಸವಾಲುಗಳನ್ನು ಕರೊನಾ ನೀಡಿದೆ. ಆದರೆ, ನಾವು ಯಾವಾಗಲು ಪರಿಸ್ಥಿತಿಯಿಂದ ಕಲಿಯಬೇಕಾಗಿದೆ. ಸಾಕಷ್ಟು ಯೋಚಿಸುವ, ಕಲಿಯುವ ಅವಕಾಶವನ್ನು ಕರೊನಾ ನಮಗೆ ನೀಡಿದೆ ಎಂದರು.

ನಾವು ಯಾವ ಮಾರ್ಗದಲ್ಲಿ ಮುನ್ನೆಡೆಯಬೇಕೆಂಬ ಮಾರ್ಗವನ್ನು ಸಹ ಕರೊನಾ ತಿಳಿಸಿದೆ. ನಮ್ಮ ಉಳಿವಿಗಾಗಿ ನಾವು ನಮ್ಮನ್ನು ಮಾತ್ರ ಅವಲಂಬಿಸಬೇಕಾಗಿದೆ ಎಂಬುದನ್ನು ಇದು ಸಂಪೂರ್ಣವಾಗಿ ಸ್ಪಷ್ಟಪಡಿಸಿದೆ ಎಂದು ಹೇಳಿದರು. (ಏಜೆನ್ಸೀಸ್​)