ನ್ಯೂಸ್

ವಿಜಯವಾಣಿ ಕಳಕಳಿ|ಭಯಬಿಡಿ ವಿಶ್ವಾಸವಿರಲಿ

ಬೆಂಗಳೂರು: ದೇಶಾದ್ಯಂತ ಕರೊನಾ ಪಾಸಿಟಿವ್ ಪ್ರಕರಣಗಳು ನಾಗಾಲೋಟದಲ್ಲಿ ಪತ್ತೆಯಾಗುತ್ತಿದ್ದರೂ, ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವರ ಪ್ರಮಾಣವೂ ಹೆಚ್ಚಿನ ಸಂಖ್ಯೆಯಲ್ಲೇ ಇದೆ. ಹೀಗಾಗಿ ಕರೊನಾ ಬಂದಿದೆ ಎಂಬ ಭಯ-ಭೀತಿಯಿಂದ, ಒತ್ತಡದಿಂದ, ಖಿನ್ನತೆಯಿಂದ, ಮುಜುಗರದಿಂದ, ಜಿಗುಪ್ಸೆಯಿಂದ, ಹಣಕಾಸು ಸಮಸ್ಯೆಗಳಿಂದ ಆತ್ಮಹತ್ಯೆಯಂಥ ವಿಪರೀತ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕರೊನಾಕ್ಕೂ ಕೊನೆಯಿದೆ. ಸ್ವಲ್ಪ ಸಂಯಮದಿಂದ ಕಷ್ಟ ಸಹಿಸಿಕೊಂಡರೆ ಒಳ್ಳೆಯ ದಿನಗಳು ಬರಲಿವೆ ಎಂಬ ಅರಿವು ಮೂಡಿಸುವ ಅಗತ್ಯ ಇದೆ.

ಕಳೆದ ಒಂದೆರಡು ತಿಂಗಳಿಂದ ಕರೊನಾ ಕಾರಣಕ್ಕೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆ, ಒತ್ತಡಕ್ಕೆ ಸಿಲುಕಿ ಹೃದಯಾಘಾತದಂಥ ಆರೋಗ್ಯ ಸಮಸ್ಯೆ ಹೆಚ್ಚಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ಇತ್ತೀಚೆಗೆ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಣಿಗಲ್ ಮೂಲದ 60 ವರ್ಷದ ವೃದ್ಧರೊಬ್ಬರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಹೊಸ ನಿದರ್ಶನ. ಆದರೆ, ಆರೋಗ್ಯ ಇಲಾಖೆ ವರದಿ ಪ್ರಕಾರ ಶನಿವಾರದವರೆಗೆ 11923 ಪಾಸಿಟಿವ್ ಪ್ರಕರಣಗಳಲ್ಲಿ 7287 ಸೋಂಕಿತರು ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ.

ದೇಶಾದ್ಯಂತ 3 ಲಕ್ಷ ಜನರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.58ಕ್ಕಿಂತ ಅಧಿಕವಿದೆ. ಹೀಗಾಗಿ ಜನರು ಭಯ ಪಡುವ ಅಗತ್ಯವಿಲ್ಲ. ಜತೆಗೆ ಕರೊನಾ ವಿರುದ್ಧ ಹೋರಾಡುತ್ತಿರುವ ಸೇನಾನಿಗಳನ್ನು ಅವಮಾನಿಸುವ, ಕರೊನಾಗೆ ಬಲಿಯಾದವರ ಕುಟುಂಬದವರನ್ನು ಬಹಿಷ್ಕರಿಸುವ, ಸೋಂಕಿತರನ್ನು ಮನೆಯಿಂದ ಹೊರಗಟ್ಟುವ ಹಲವು ಪ್ರಕರಣ ಬೆಳಕಿಗೆ ಬರುತ್ತಿದ್ದು, ಸಮಾಜ ಮಾನವೀಯತೆಯಿಂದ ವರ್ತಿಸಬೇಕಿದೆ.