ನ್ಯೂಸ್

ಮೊದಲ ಹಂತದಲ್ಲಿ 375 ಜನರ ಮೇಲೆ ದೇಶೀಯ ಲಸಿಕೆ ಕೊವಾಕ್ಸಿನ್​ ಪ್ರಯೋಗ; 13ರವರೆಗೆ ನೋಂದಣಿಗೆ ಅವಕಾಶ

ನವದೆಹಲಿ: ಆಗಸ್ಟ್​ 15ರ ಗುರಿ ಹೊಂದಿರುವ ದೇಶಿಯ ಕರೊನಾ ಲಸಿಕೆ ಕೊವಾಕ್ಸಿನ್​ಅನ್ನು ​ ಮೊದಲ ಹಂತದಲ್ಲಿ 375 ಜನರಿಗೆ ನೀಡಲಾಗುತ್ತಿದೆ.

ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​ಅನ್ನು ಮಾನವರ ಮೇಲೆ ಪ್ರಯೋಗ (ಕ್ಲಿನಿಕಲ್​ ಟ್ರಯಲ್​) ಮಾಡಲಾಗುತ್ತಿದೆ.

ಅತ್ಯಂತ ಭರವಸೆದಾಯಕ ಎನಿಸಿರುವ ಈ ಲಸಿಕೆಯ ಪ್ರಯೋಗಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​ ) ಸಾಥ್​ ನೀಡಿದೆ. ಲಸಿಕೆಗೆ ಒಳಗಾಗುವ ವ್ಯಕ್ತಿಗಳ ನೋಂದಣಿಗೆ ಜುಲೈ 13ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಮೊದಲ ಹಂತದಲ್ಲಿ 375 ಹಾಗೂ ಎರಡನೇ ಹಂತದಲ್ಲಿ 750 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿಯ ಸಂಶೋಧಕರು ಮಾಹಿತಿ ನೀಡಿದ್ದಾರೆ.

ಆಗಸ್ಟ್​ 15ಕ್ಕೆ ಈ ಲಸಿಕೆ ಹಣೆಬರಹವನ್ನು ತಿಳಿದುಕೊಳ್ಳಲು ಆತುರ ತೋರಿಸಲಾಗುತ್ತಿದೆಯಾದರೂ, ಮೊದಲ ಹಂತದ ಪ್ರಯೋಗವೇ ಮೂರು ತಿಂಗಳವರೆಗೆ ನಡೆಯಲಿದೆ ಎಂದು ಈ ಕಾರ್ಯದಲ್ಲಿ ತೊಡಗಿಕೊಂಡಿರುವ ತಜ್ಞರು ತಿಳಿಸಿದ್ದಾರೆ. ಹೀಗಾಗಿ ಆಗಸ್ಟ್​ 15ರ ವೇಳೆಗೆ ರೊಗಿಗಳ ಬಳೆಗೆ ದೊರೆಯುವುದು ಅಸಾಧ್ಯ ಎಂಬುದು ಸ್ಪಷ್ಟವಾಗಿದೆ.

ಇನ್ನೊಂದೆಡೆ, ಲಸಿಕೆಯ ಕ್ಲಿನಿಕಲ್​ ಟ್ರಯಲ್​ನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಮಾಡೆರ್ನಾ ಕಂಪನಿ ಅಂತಿಮ ಹಂತದಲ್ಲಿ 30,000 ಜನರ ಮೇಲೆ ಔಷಧ ಪ್ರಯೋಗಿಸಲಿದೆ. ಈ ಕಾರ್ಯವನ್ನು ಕೊಂಚ ವಿಳಂಬಗೊಳಿಸಿದೆ ಎಂದು ಹೇಳಲಾಗಿದೆ. ಆಕ್ಸ್​ಫರ್ಡ್​ ವಿವಿಯ ಲಸಿಕೆ ಪ್ರಯೋಗ ಮೂರನೇ ಹಂತದಲ್ಲಿ ಮುಂದುವರಿದಿದೆ.