ನ್ಯೂಸ್

ಲೈಂಗಿಕ ದೌರ್ಜನ್ಯ ಎಸಗಿದ 29 ದಿನಗಳಲ್ಲಿಯೇ ದೋಷಿಗೆ ಶಿಕ್ಷೆ ವಿಧಿಸಿದ ಕೋರ್ಟ್​! | Court

Court : ಲೈಂಗಿಕ ದೌರ್ಜನ್ಯ ನಡೆದ 29 ದಿನಗಳಲ್ಲಿಯೇ ದೋಷಿಗೆ ಕೋರ್ಟ್​ ಶಿಕ್ಷೆ ವಿಧಿಸಿದ ಅಪರೂಪ ಘಟನೆ ದೇಶದಲ್ಲಿ ನಡೆದಿದೆ.

ತ್ವರಿತ ಮತ್ತು ನಿರ್ಣಾಯಕ ಕಾನೂನು ಕ್ರಮದಲ್ಲಿ, ಮಹಾರಾಷ್ಟ್ರದ ಪಾಲ್ಘರ್‌ನ ನ್ಯಾಯಾಲಯವು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಬುಧವಾರ(ಏ.30) ಒಂದು ವರ್ಷ ಜೈಲು ಶಿಕ್ಷೆ ಮತ್ತು 5,000 ರೂ.ದಂಡ ವಿಧಿಸಿದೆ.

ಪ್ರಕರಣ ಏನು..?

ಈ ಘಟನೆ ಇದೇ ಮಾ.30 2025ರ ಸಂಜೆ ಕೆಲ್ವೆ ರಸ್ತೆ ಪೂರ್ವದ ಧೋಂಧಲ್ಪದ (ಮಹಾರಾಷ್ಟ್ರ) ಬಳಿ ನಡೆದಿದೆ. ಸಂತ್ರಸ್ತೆ ರಾತ್ರಿ 8:30ರ ಸುಮಾರಿಗೆ ಅಲಂಕಾರಿಕ ಬಿಂದಿ (ಟಿಕ್ಲಿ) ತಯಾರಿಸಲು ಬಳಸುವ ಕಚ್ಚಾ ವಸ್ತುಗಳನ್ನು ಹೊತ್ತುಕೊಂಡು ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ, ಸ್ಥಳೀಯ ನಿವಾಸಿಯಾಗಿರುವ ಆರೋಪಿ ಓಂಕಾರ್ ಸಂತೋಷ್ ಜಾಧವ್ ಆಕೆಯ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಘಟನೆ ಬಳಿಕ ಮಾ.31 ರಂದು ಆರೋಪಿ ವಿರುದ್ಧ ಇಲ್ಲಿನ ಸಫಲೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪರಾಧದ ಗಂಭೀರತೆಯನ್ನು ಅರೆತ ಪೊಲೀಸ್ ವರಿಷ್ಠಾಧಿಕಾರಿ ಬಾಳಾಸಾಹೇಬ್ ಪಾಟೀಲ್, ತನಿಖೆ ಚುರುಕುಗೊಳಿಸಿದ್ದಾರೆ. ಕೇವಲ 24ಗಂಟೆಯಲ್ಲಿ(ಏ.1ರಂದು) ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.

ಶಿಕ್ಷೆ ಪ್ರಕಟ ಮಾಡಿದ ಕೋರ್ಟ್​

ಪಾಲ್ಘರ್‌ನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 29 ದಿನಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದೆ. ಪ್ರತ್ಯಕ್ಷದರ್ಶಿಗಳು ಮತ್ತು ಇತರ ನಿರ್ಣಾಯಕ ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಕೋರ್ಟ್​, ಏ.29ರಂದು ಜಾಧವ್ ತಪ್ಪಿತಸ್ಥರೆಂದು ಘೋಷಿಸಿ ತನ್ನ ತೀರ್ಪು ಪ್ರಕಟಿಸಿದೆ.(ಏಜೆನ್ಸೀಸ್​)