ನ್ಯೂಸ್

ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಹಾಕಲಾಗಿದ್ದ ಕೇಸ್​ ರದ್ದುಗೊಳಿಸಿದ ಕೋರ್ಟ್​​! ಹೀಗಿದೆ ಕಾರಣ | Actress Shilpa Shetty

ಮುಂಬೈ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ(Actress Shilpa Shetty) ಅವರ ವಿರುದ್ಧ 2017ರಲ್ಲಿ ಹೂಡಲಾಗಿದ್ದ ಕೇಸ್ (ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ)​ ಅನ್ನು ಇದೀಗ ರಾಜಸ್ಥಾನ ಹೈಕೋರ್ಟ್​ ವಜಾಗೊಳಿಸಿದೆ.

ನಟಿ ಶಿಲ್ಪಾ ಶೆಟ್ಟಿ ಅವರು ಖಾಸಗಿ ಸಂದರ್ಶನವೊಂದರಲ್ಲಿ 'ಭಂಗಿ' ಎಂಬ ಪದ ಬಳಸಿದ್ದರು. ಈ ಪದ ಬಳಕೆ ಮಾಡಿದ್ದರಿಂದ ವಾಲ್ಮೀಕಿ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ, ಅಶೋಕ್​ ಪನ್ವಾರ್​ ಎಂಬುವವರು ಎಸ್​/ಎಸ್​ಟಿ (SC/ST) ದೌರ್ಜನ್ಯ ತಡೆ ಕಾಯ್ದೆ ಅಡಿ 2017ರಲ್ಲಿ ಪ್ರಕರಣ ದಾಖಲಿಸಿದ್ದರು.

ಶಿಲ್ಪಾ ಶೆಟ್ಟಿ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್​ ಪಾಟೀಲ್​, "ಶಿಲ್ಪಾ 2013ರ ಸಂದರ್ಶನವೊಂದರಲ್ಲಿ 'ಭಂಗಿ' ಎಂಬ ಪದ ಬಳಸಿದ್ದಾರೆ. ಆದರೆ, ದೂರುದಾರರು ಮೂರು ವರ್ಷಗಳ ಬಳಿಕ ಸಂದರ್ಶನ ವೀಕ್ಷಿಸಿ 2017ರಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಈ ಹೇಳಿಕೆ ಬಗ್ಗೆ ನಮ್ಮ ಅರ್ಜಿದಾರರು ಈಗಾಲೇ ಕ್ಷಮೆಯಾಚಿಸಿದ್ದಾರೆ. ಈ ಪದವನ್ನು ಉದ್ದೇಶ ಪೂರಕವಾಗಿ ಬಳಸಿಲ್ಲ. ಹೀಗಾಗಿ, ಕೇಸ್​ ರದ್ದುಗೊಳಿಸಬೇಕು" ಎಂದು ಕೋರ್ಟ್​ಗೆ ಮನವಿ ಮಾಡಿದರು.

ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಅರುಣ್​ ಮೊಂಗಾ ನೇತೃತ್ವದ ಪೀಠ, ಎಸ್ಸಿ/ಎಸ್ಟಿ ಕಾಯ್ದೆಯಡಿಯಲ್ಲಿ ದಾಖಲಾದ ಕೇಸ್​ಗೆ ಸಂಬಂಧಿಸಿದಂತೆ ದೂರುದಾರರು ಪೂರಕ ದಾಖಲೆ ಒದಗಿಸಲು ವಿಫಲರಾಗಿದ್ದಾರೆ. ಹೀಗಾಗಿ, ಕೇಸ್​ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿ, ಅರ್ಜಿ ವಜಾಗೊಳಿಸಿದ್ದಾರೆ,(ಏಜೆನ್ಸೀಸ್). ​​