ನ್ಯೂಸ್

ನಟಿ ರಾಗಿಣಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಅ. 16ಕ್ಕೆ ನಿರ್ಧಾರ

ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದಲ್ಲಿರುವ ನಟಿ ರಾಗಿಣಿ ದ್ವಿವೇದಿ, ತನಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅನುಮತಿ ನೀಡುವಂತೆ ಕೋರಿ ನಗರದ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬೆನ್ನು ನೋವು ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಗುಣಮಟ್ಟದ ಚಿಕಿತ್ಸೆಯ ಅಗತ್ಯವಿದೆ. ಹೀಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಮತ್ತು ತಾಯಿ ಬಳಿಯಿದ್ದ ಐಪ್ಯಾಡ್, ಪೆನ್‌ಡ್ರೈವನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ತಕ್ಷಣ ಬಿಡುಗಡೆ ಮಾಡಲು ಸೂಚನೆ ನೀಡಬೇಕು. ಪ್ರಕರಣ ಕುರಿತು ಮಾಹಿತಿ ಪಡೆಯಲು ಸಂಬಂಧಿಕರು ಮತ್ತು ವಕೀಲರು ಭೇಟಿ ಮಾಡುವುದಕ್ಕೆ ಅವಕಾಶ ನೀಡಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಸಿಬಿ ಪರ ವಕೀಲರು, ಅರ್ಜಿದಾರರಿಗೆ ಆರೋಗ್ಯ ಸಮಸ್ಯೆ ಇರುವ ಕುರಿತು ಯಾವುದೆ ದಾಖಲೆಗಳನ್ನು ಸಲ್ಲಿಸಿಲ್ಲ. ಪ್ರಕರಣದ ತನಿಖೆ ಮುಂದುವರೆಯುತ್ತಿದ್ದು, ಈ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಲು ಅವಕಾಶ ಇಲ್ಲ. ಜೊತೆಗೆ, ಬಂಧೀಖಾನೆ ನಿಯಮಗಳ ಪ್ರಕಾರ ವಕೀಲರು ಮತ್ತು ಸಂಬಂಧಿಕರ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಎಲ್ಲ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಅ.16ಕ್ಕೆ ಮುಂದೂಡಿದ್ದಾರೆ.