ನ್ಯೂಸ್

ಮಕ್ಕಳಾಗಲಿ ಎಂದು ವಿಶೇಷ ಪೂಜೆ ಮಾಡಲಿಕ್ಕೆ ದೇವಸ್ಥಾನಗಳ ಮೂರ್ತಿಗಳನ್ನು ಕದ್ದ ದಂಪತಿ!; ಗಂಡ ಸಿಕ್ಕಿಬಿದ್ದರೂ ಹೆಂಡತಿ ಸಿಕ್ಕಿಲ್ಲ..

ಹೈದರಾಬಾದ್​: ಮದುವೆಯಾಗಿ ಬಹಳ ದಿನಗಳಾದರೂ ಮಕ್ಕಳಾಗಲಿಲ್ಲ ಎಂದರೆ ದಂಪತಿ ಏನೇನೋ ಪೂಜೆ-ಪುನಸ್ಕಾರ, ಹರಕೆಗಳನ್ನು ಕೈಗೊಳ್ಳುತ್ತಾರೆ. ಅದು ತಪ್ಪೇನೂ ಅಲ್ಲ. ಆದರೆ ಇಲ್ಲೊಂದು ದಂಪತಿ ಮಕ್ಕಳಾಗಲಿ ಎಂದು ವಿಶೇಷ ಪೂಜೆ ಮಾಡಲಿಕ್ಕಾಗಿ ದೇವಸ್ಥಾನಗಳ ಮೂರ್ತಿಗಳನ್ನೇ ಕದ್ದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸಂತಪುರಂ ಸಿದ್ದೇಶ್ ಸಿಕ್ಕಿಬಿದ್ದಿದ್ದರೂ ಪತ್ನಿ ಎಸ್​. ಸುಜಾತಾ ಇನ್ನೂ ಪತ್ತೆಯಾಗಿಲ್ಲ. ಆದರೆ ಸಿಕ್ಕಿಹಾಕಿಕೊಂಡಿರುವ ಪತಿಯಿಂದ ಕದ್ದ ಮೂರ್ತಿಗಳನ್ನು ಹಾಗೂ ಮೊಬೈಲ್​ಫೋನೊಂದನ್ನು ವಶಪಡಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹೈದರಾಬಾದ್​ನ ಬಂಜಾರಾ ಹಿಲ್ಸ್​ ಪ್ರದೇಶದ ಫಿಲ್ಮ್​ ನಗರದ ದೀನದಯಾಳ್ ನಗರದ ನಿವಾಸಿಗಳಾಗಿರುವ ಈ ದಂಪತಿಯಲ್ಲಿ ಇಬ್ಬರೂ 27 ವರ್ಷ ವಯಸ್ಸಿನವರು. ಮಕ್ಕಳಾಗದ ಕಾರಣಕ್ಕೆ ಬೇಸರಗೊಂಡಿದ್ದ ಈ ದಂಪತಿ ಮಾಂತ್ರಿಕನೊಬ್ಬನ ಸಲಹೆಯಂತೆ ಇಂಥದ್ದೊಂದು ಕೆಲಸಕ್ಕೆ ಮುಂದಾಗಿದ್ದರು. ನಾಗ ದೇವತೆ, ಕಟ್ಟ ಮೈಸಮ್ಮ ಹಾಗೂ ನರಸಿಂಹ ಸ್ವಾಮಿ ದೇವರ ಮೂರ್ತಿಗಳನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಮಕ್ಕಳಾಗುತ್ತದೆ ಎಂದು ಮಾಂತ್ರಿಕನೊಬ್ಬ ಈ ದಂಪತಿಗೆ ಸಲಹೆ ನೀಡಿದ್ದ.

ಮಾಂತ್ರಿಕನ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ಈ ದಂಪತಿ 2020ರ ಡಿ. 11ರಂದು ನಾನಲ್ ನಗರದ ಶ್ರೀಕೊವೆಲ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿನ ಗೋಡೆಗೆ ನೇತು ಹಾಕಿದ್ದ ಹಿತ್ತಾಳೆ ಲೇಪಿತ ಲಕ್ಷ್ಮೀನರಸಿಂಹ ಸ್ವಾಮಿ ದೇವರ ಮೂರ್ತಿಯನ್ನು ಕದ್ದಿದ್ದರು. ಜ. 18ರಂದು ಜಿಯಗುಡದಲ್ಲಿನ ಕಟ್ಟ ಮೈಸಮ್ಮ ದೇವಸ್ಥಾನದ ಕಟ್ಟ ಮೈಸಮ್ಮ ಮತ್ತು ನಾಗ ದೇವತೆಯ ಹಿತ್ತಾಳೆ ಲೇಪಿತ ಮೂರ್ತಿಗಳನ್ನು ಕದ್ದಿದ್ದರು. ಕುಲ್ಸುಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. (ಏಜೆನ್ಸೀಸ್​)