ನ್ಯೂಸ್

30 ರೂ.ಲಿಪ್‌ಸ್ಟಿಕ್​ಗೆ ಕಿತ್ತಾಡಿದ ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ರು..!ಕಡೆಗೆ ಏನಾಯಿತು?

ಆಗ್ರಾ: ಪತಿ ದುಬಾರಿ ಲಿಪ್‌ಸ್ಟಿಕ್‌ ತಂದನೆಂದು ಪತ್ನಿ ದೂರಿದ್ದು, ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊನೆಗೆ ವಿಚ್ಛೇದನ ಪಡೆದುಕೊಳ್ಳುವ ಹಂತಕ್ಕೆ ಬಂದಿ ನಿಂತಿತ್ತು. ಆದರೆ ಎರಡು ವರ್ಷದ ಬಳಿಕ ಕೌನ್ಸೆಲಿಂಗ್‌ ನಲ್ಲಿ ತಪ್ಪಿನ ಅರಿವಾಗಿ ಮತ್ತೆ ಒಂದಾಗಿದ್ದಾರೆ.

ಕೌನ್ಸಿಲರ್ ಸತೀಶ್ ಖರಿವಾರ್ ಈ ವಿಚಿತ್ರ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಪತ್ನಿ ಉತ್ತರಪ್ರದೇಶದ ಎತ್ಮದ್‌ಪುರ ಪ್ರದೇಶದವರಾಗಿದ್ದು, ಪತಿ ಮಥುರಾ ಮೂಲದವರು ಎಂದು ತಿಳಿದುಬಂದಿದೆ. ಲಿಪ್ ಸ್ಟಿಕ್ ವಿಚಾರವಾಗಿ ಜಗಳ ಹೆಚ್ಚಾದ ಹಿನ್ನೆಲೆಯಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದರು. ಇಬ್ಬರೂ ಇದೀಗ ಕೌನ್ಸೆಲಿಂಗ್ ನಲ್ಲಿ ಮತ್ತೆ ಒಂದಾಗಿದ್ದಾರೆ.

ಅಗ್ಗದ ಲಿಪ್​ಸ್ಟಿಕ್​ ತರುವ ಬದಲು ಪತ್ನಿ ಸೌಂದರ್ಯ ಹೆಚ್ಚಾಗಲೆಂದು ಪತಿ 30 ರೂ.ಬೆಲೆಯ "ದುಬಾರಿ" ಲಿಪ್‌ಸ್ಟಿಕ್‌ ಖರೀದಿಸಿ ಮನೆಗೆ ತಂದಿದ್ದ. ಮನೆಯ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲದಿದ್ದರೂ ಪತಿ ದುಂದುವೆಚ್ಚ ಮಾಡಲು ಮುಂದಾಗಿದ್ದಾನೆ ಎಂದು ಮಹಿಳೆ ದೂರಿದ್ದಳು.

ದಂಪತಿ ನಡುವಿನ ಜಗಳವಿಕೋಪಕ್ಕೆ ತಿರುಗಿದ್ದು, ಹೆಂಡತಿ ತನ್ನ ತಾಯಿಯ ಮನೆಗೆ ಹೊರಟುಹೋದಳು. ಅಷ್ಟಕ್ಕೆ ಸುಮ್ಮನಾಗದ ಪತ್ನಿ ಸಮಸ್ಯೆಯನ್ನು ಎತ್ಮಾದಪುರ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಳು. ನಂತರ ಪೊಲೀಸರು ಈ ಬಗ್ಗೆ ಪರಿಶೀಲಿಸಲು ಕುಟುಂಬ ಸಲಹಾ ಕೇಂದ್ರವನ್ನು ಕೋರಿದರು.

ಈ ಮಧ್ಯೆ ಕುಟುಂಬ ಸಮಾಲೋಚನೆ ಕೇಂದ್ರವು ದಂಪತಿಯನ್ನು ಪರಸ್ಪರ ಅರ್ಥಮಾಡಿಕೊಳ್ಳಲು ಕೇಳಿಕೊಂಡಿತು. ಪತಿ ಆಕೆಯ ಆಯ್ಕೆಯ ಲಿಪ್ಸ್ಟಿಕ್ ಅನ್ನು ಖರೀದಿಸಲು ಒಪ್ಪಿಕೊಂಡ. ವಿಚ್ಛೇದನ ಪಡೆದುಕೊಳ್ಳಲು ತೀರ್ಮಾನಿಸಿದ್ದ ದಂಪತಿ ಕಡೆಗೆ ಒಟ್ಟಿಗೆ ಜೀವಿಸುವುದಾಗಿ ಹೇಳಿದರು.