ನ್ಯೂಸ್

ಕೈ ಕಟ್ಟಿಕೊಂಡು ನರ್ಮದಾಗೆ ಹಾರಿದ ಪ್ರೇಮಿಗಳು! ಹೊಲದಲ್ಲಿ ಅರಳಿದ್ದ ಪ್ರೀತಿ ನೀರಲ್ಲಿ ಅಂತ್ಯವಾಯ್ತು

ಜೈಪುರ: ಜೀವನಪೂರ್ತಿ ಜತೆಬಾಳುವ ಕನಸು ಕಂಡಿದ್ದ ಪ್ರೇಮಿಗಳು ನರ್ಮದಾ ನದಿಯ ಕಾಲುವೆಗೆ ಧುಮುಕಿ ಪ್ರಾಣ ಬಿಟ್ಟಿರುವ ಘಟನೆ ರಾಜಸ್ಥಾನದ ಜಲೋರ್​ ಜಿಲ್ಲೆಯಲ್ಲಿ ನಡೆದಿದೆ. ಊರು ಬಿಟ್ಟು ಬಂದಿದ್ದ ಜೋಡಿಯನ್ನು ಕುಟುಂಬದವರು ಬೆನ್ನತ್ತಿದ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವವರು ಜಲೋರ್​ ಜಿಲ್ಲೆಯ ಗುಂಡೌ ಗ್ರಾಮದ ನಿವಾಸಿಗಳಾಗಿದ್ದರು. ಕೆಲ ದಿನಗಳ ಹಿಂದೆ ಯುವತಿಯ ತಂದೆ ಹೊಲದಲ್ಲಿ ಕೆಲಸ ಮಾಡಲೆಂದು ಯುವಕನನ್ನು ಕುಡಿ ಪೊಲೀಸ್​ ಠಾಣಾ ವ್ಯಾಪ್ತಿಯ ಹಳ್ಳಿಯೊಂದಕ್ಕೆ ಕರೆ ತಂದಿದ್ದ. ಒಂದೇ ಹೊಲದಲ್ಲಿ ಕೆಲಸಕ್ಕೆ ನಿಂತ ಯುವಕ, ಯುವತಿಯ ಮಧ್ಯೆ ಪ್ರೀತಿ ಹುಟ್ಟಿತ್ತು. ಅವರಿಬ್ಬರು ಇತ್ತೀಚೆಗೆ ಊರು ಬಿಟ್ಟು ಓಡಿ ಬಂದಿದ್ದಾರೆ. ಅದಾದ ನಂತರ ಕುಟುಂಬದವರಿಗೆ ಈ ವಿಚಾರ ತಿಳಿದುಬಂದಿದ್ದು, ಅವರೂ ಈ ಜೋಡಿಯ ಬೆನ್ನತ್ತಿಕೊಂಡು ಬರಲಾರಂಭಿಸಿದ್ದಾರೆ. ನಾವು ಹೀಗೇ ಇದ್ದರೆ ನಮ್ಮಿಬ್ಬರನ್ನು ಬೇರೆ ಮಾಡಿ ಬಿಡುತ್ತಾರೆ ಎಂದು ಹೆದರಿದ ಪ್ರೇಮಿಗಳು ಇಬ್ಬರ ಕೈ ಸೇರಿಸಿ ಹಗ್ಗ ಕಟ್ಟಿಕೊಂಡು, ನರ್ಮದಾ ನದಿ ನೀರಿನ ಕಾಲುವೆಗೆ ಹಾರಿದ್ದಾರೆ. ಕಾಲುವೆಯ ಬಳಿ ಕೆಲಸ ಮಾಡುತ್ತಿದ್ದ ಕೃಷಿಕರು ಓಡಿ ಬಂದು ತಡೆಯುವಷ್ಟರಲ್ಲಿ ಅವರ ದೇಹಗಳು ತೇಲಿಕೊಂಡು ಸಾಕಷ್ಟು ದೂರ ಹೋಗಿತ್ತು ಎನ್ನಲಾಗಿದೆ.

ಈ ವಿಚಾರವಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ಮುಟ್ಟಿಸಲಾಗಿದೆ. ಎನ್​ಡಿಆರ್​ಎಫ್​ ತಂಡಕ್ಕೂ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಸುಮಾರು 20 ತಾಸು ಹುಡುಕಾಟ ನಡೆಸಿದ ನಂತರ ಇಬ್ಬರ ಮೃತದೇಹ ಸಿಕ್ಕಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)